ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಅಗತ್ಯ

11.2
Published on

ಹೊಳೆನರಸೀಪುರ: ಸರ್ಕಾರಿ ಶಾಲೆಯಲ್ಲಿ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಚೆನ್ನಾಗಿ ಓದಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸೃಜನಾ ಚಾರಿಟಬಲ್ ಟ್ರಸ್ಟ್ ಕಳೆದ 5 ವರ್ಷಗಳಿಂದ ಸನ್ಮಾನಿಸಿ ಪ್ರೋತ್ಸಾಹಿಸುತ್ತಿದೆ ಎಂದು ಟ್ರಸ್ಟಿ ರವಿಪ್ರಕಾಶ್ ತಿಳಿಸಿದರು.

ಶುಕ್ರವಾರ ಚಿಟ್ಟನಹಳ್ಳಿ ಹೌಸಿಂಗ್ ಬೋರ್ಡ್ ಬಡಾವಣೆಯ ಮುರಾರ್ಜಿ ಅಲ್ಪಸಂಖ್ಯಾತ ವಸತಿ ಶಾಲೆಯಲ್ಲಿ ಕೆನರಾ ಬ್ಯಾಂಕ್ ಜ್ಯೂಬಿಲಿ ಎಜುಕೇಷನ್ ಫಂಡ್ ಹಾಗೂ ಸೃಜನಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.93ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಮುಖ್ಯಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸುತ್ತಿದ್ದೇವೆ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಮಾತನಾಡಿ, ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಆರ್‌ಸಿ ಭಾಗ್ಯಮ್ಮ ಮಾತನಾಡಿ, ಟ್ರಸ್ಟ್‌ನವರು ಕಳೆದ 5 ವರ್ಷಗಳಿಂದ ಪ್ರೋತ್ಸಾಹ ನೀಡುತ್ತಿದ್ದಾರೆ. ಇವರ ಸೇವೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಗುತ್ತಿದೆ. ಇಂತಹ ಮನೋಭಾವ ಎಲ್ಲರಿಗೂ ಬರಬೇಕು ಎಂದರು.

ಕೆನರಾ ಬ್ಯಾಂಕ್ ಅಧಿಕಾರಿ ಗಾಯತ್ರಿ ಮಾತನಾಡಿ, ಕೆನರಾ ಬ್ಯಾಂಕ್‌ನಲ್ಲಿ ವಿದ್ಯಾರ್ಥಿಗಳಿಗೆ ಇರುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಸರ್ಕಾರಿ ಶಾಲೆಯಲ್ಲಿ ಓದಿ ಶೇ.93ಕ್ಕಿಂತ ಹೆಚ್ಚು ಅಂಕ ಪಡೆದ 20 ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ರೂ. ನಗದು ಹಾಗೂ ಮುಖ್ಯಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಕೆನರಾ ಬ್ಯಾಂಕ್ ಜ್ಯೂಬಿಲಿ ಎಜುಕೇಷನ್ ಫಂಡ್ ಮುಖ್ಯಸ್ಥ ಅನಂತರಾಮ್ ಭಟ್ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಶ್ರೀನಾಥ್, ಆನಂದ ಮೂರ್ತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net