ಸರ್ಕಾರಿ ಶಾಲೆಗಳ ವಿಕಾಸಕ್ಕೆ ಸಂಕಲ್ಪಿಸಲು ಕರೆ

26 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಗುಣಮಟ್ಟದ ಶಿಕ್ಷಣವೂ ಸೇರಿ ಎಲ್ಲ ನೆಲೆಗಳಲ್ಲಿ ರಾಜ್ಯದ ಸರ್ಕಾರಿ ಶಾಲೆಗಳ ಸರ್ವಾಂಗೀಣ ವಿಕಾಸಕ್ಕೆ ಶಾಲಾ ಮುಖ್ಯಾಧ್ಯಾಪಕರು ಹಾಗೂ ಸಹ ಶಿಕ್ಷಕ-ಶಿಕ್ಷಕಿಯರು ಸಂಕಲ್ಪ ಮಾಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಕಿತ್ತೂರು ಕರ್ನಾಟಕ ವಲಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿರ್ದೇಶಕಿ ಮಮತಾ ನಾಯಕ ಕರೆ ನೀಡಿದರು.
ನಗರದ ಡಯಟ್ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕರ ಕೋರಿಕೆ ವರ್ಗಾವಣೆ ಹಾಗೂ ಅಧಿಸೂಚಿತ ಹುದ್ದೆಗಳಲ್ಲಿ 3 ರಿಂದ 5 ವರ್ಷಗಳ ಸೇವೆ ಪೂರೈಸಿರುವ ಅಧಿಕಾರಿಗಳಿಗೆ ಪುನಃ ಸಮಾನಾಂತರ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗಳಿಗೆ ವರ್ಗಾವಣೆ ಆದೇಶ ವಿತರಿಸಿ ಅವರು ಮಾತನಾಡಿದರು.
ಕನ್ನಡ ವಿಷಯ ಪರಿವೀಕ್ಷಕರಾಗಿದ್ದ ಡಾ.ಪೂರ್ಣಿಮಾ ಮುಕ್ಕುಂದಿ(ಧಾರವಾಡ ಡಿಡಿಪಿಐ ಕಚೇರಿ) ಹಾಗೂ ಶಿವಪ್ಪ ಮರೇಗುದ್ದಿ(ಬಾಗಲಕೋಟ ಡಿಡಿಪಿಐ ಕಚೇರಿ) ಅವರಿಗೆ ಕ್ರಮವಾಗಿ ತಾಲೂಕಿನ ಕರಡಿಗುಡ್ಡ ಸರ್ಕಾರಿ ಪ್ರೌಢ ಶಾಲೆಗೆ ಮತ್ತು ಜಮಖಂಡಿ ತಾಲೂಕು ಯಲ್ಲಟ್ಟಿ ಸರ್ಕಾರಿ ಪ್ರೌಢ ಶಾಲೆಗೆ ಸ್ಥಳ ನಿಯುಕ್ತಿ ಆದೇಶ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಕಿತ್ತೂರು ಕರ್ನಾಟಕ ವಲಯದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಮಾರ್ಗದರ್ಶನದಲ್ಲಿ ನಡೆದ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಂಜೀವ ಬಿಂಗೇರಿ, ಅಧಿಕಾರಿಗಳಾದ ಪಾರ್ವತಿ ವಸ್ತ್ರದ, ಸುಜಾತಾ ತಿಮ್ಮಾಪುರ, ಶಾಂತಾ ಮೀಸಿ, ಬಿ.ಬಿ. ದುಬ್ಬನಮರಡಿ, ಮಂಜಯ್ಯ ಶಿವಳ್ಳಿಮಠ, ಸಂಜಯ ಮಾಳಿ, ಶಿವಲೀಲಾ ಕಳಸಣ್ಣವರ, ಅರಿಹಂತ ಬಿರಾದಾರ, ಪ್ರಕಾಶ ಹೊಸಮನಿ, ಅಧೀಕ್ಷಕ ರಮೇಶ ದಂಡಿಗೆದಾಸರ, ಲಕ್ಷ್ಮಣ ಜಿ. ಪಾಟೀಲ, ಇತರರು ಇದ್ದರು.
ಕೋರಿಕೆ ವರ್ಗಾವಣೆಯಲ್ಲಿ ಕೌನ್ಸೆಲಿಂಗ್‌ಗೆ ಹಾಜರಾಗಿದ್ದ 262 ಜನರ ಪೈಕಿ 29 ಜನ ಮಾತ್ರ ಸ್ಥಳ ಆಯ್ಕೆ ಮಾಡಿಕೊಂಡು ಸ್ಥಳದಲ್ಲೇ ಆದೇಶಗಳನ್ನು ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net