ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇಚ್ಛಾಶಕ್ತಿ ಕೊರತೆ

25rajesh1
Published on

ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿತ್ತಿವೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇಚ್ಛಾಶಕ್ತಿ ಕೊರತೆ ಕಂಡುಬರುತ್ತಿದೆ ಎಂದು ಸುತ್ತೂರು ಮಠದ ಶ್ರೀಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಘಟಕದಿಂದ ಮಂಗಳವಾರ ಆಯೋಜಿಸಿದ್ದ ಶ್ರೀ ಶಿವರಾತ್ರಿರಾಜೇಂದ್ರ ಸೇವಾ ಪ್ರಶಸ್ತಿ ಹಾಗೂ ಕೆ.ಸಿ. ಶಿವಪ್ಪ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸರ್ಕಾರಿ ಸವಲತ್ತು ಪಡೆದುಕೊಳ್ಳುವ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂಬ ಮನೋಭಾವನೆ ಬಂದು ಬಿಟ್ಟರೆ, ಸರ್ಕಾರಿ ಶಾಲೆಗಳು ತಾನಾಗಿಯೇ ಅಭಿವೃದ್ದಿ ಹೊಂದುತ್ತವೆ. ಸರ್ಕಾರಿ ಶಾಲೆಗಳಲ್ಲಿಯೇ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಓದಿಸಬೇಕೆಂಬ ಕಾನೂನು ಬಂದರೆ, ಯಾರು ಸಹ ಅಭಿವೃದ್ದಿ ಮಾಡಬೇಕಿಲ್ಲ. ತಾನಗೇ ತಾನೆ ಎಲ್ಲಾ ಶಾಲೆಗಳು ಪ್ರಗತಿಯಾಗುತ್ತದೆ. ಇದನ್ನು ಮಾಡುವ ಇಚ್ಚಾಶಕ್ತಿ ಕೊರತೆ ಇದೆ ಎಂದರು.

ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಬಡ ಹೆಣ್ಣು ಮಗಳು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ ಎಂದರೆ, ಆಕೆಯಲ್ಲಿದ್ದ ಓದುವ ಉತ್ಸಾಹ ಮತ್ತು ಸಾಧಿಸಬೇಕೆಂಬ ಛಲ ಕಾರಣವಾಗಿದೆ. ಈ ಮೂಲಕ ಗ್ರಾಮೀಣ ಭಾಗದ ಮಕ್ಕಳು ಹೆಚ್ಚು ಪ್ರತಿಭಾವಂತರು ಎಂಬ ಸಂದೇಶವನ್ನು ಸಾರಿದ್ದಾಳೆ.ವಿದ್ಯೆ ಸಾಧಕನ ಸೊತ್ತೇ ಹೊರತು ಸೋಮಾರಿಗಳದ್ದಲ್ಲ ಎಂಬುದನ್ನು ಎಲ್ಲರು ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜೇಂದ್ರಶ್ರೀಗಳಿಗೆ ಚಾಮರಾಜನಗರ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಇತ್ತು. ಹೀಗಾಗಿ ಮೈಸೂರು ಹೊರತು ಪಡಿಸಿ ಚಾ.ನಗರ ಜಿಲ್ಲೆಯ ಭಾಗಗಳಿಗೆ ಹೆಚ್ಚಿನ ಒತ್ತು ನೀಡಿದ್ದರು. ಮಠದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದ ದುಗ್ಗಹಟ್ಟಿ ವೀರಭದ್ರಪ್ಪ ಅವರ ಸಮಾಜ ಸೇವೆಯನ್ನು ಗುರುತಿಸಿ ಶ್ರೀರಾಜೇಂದ್ರ ಸೇವಾ ಪ್ರಶಸ್ತಿಯನ್ನು ಅವರಿಗೆ ನೀಡುತ್ತಿರುವುದು ಸಂತಸವಾಗಿದೆ ಎಂದು ಹೇಳಿದರು.

ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ರಾಜೇಂದ್ರ ಶ್ರೀಗಳು ಧಾರ್ಮಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಕೊಡುಗೆ ನೀಡಿದ್ದಾರೆ. ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವ ಪರಿಕಲ್ಪನೆಯೊಂದಿಗೆ ಪರಿಷತ್ ಸ್ಥಾಪನೆ ಮಾಡಿದರು. ಅವರ ಉದ್ದೇಶವನ್ನು ಕೆ.ಸಿ. ಶಿವಪ್ಪ ಅವರು ದತ್ತಿ ಸ್ಥಾಪನೆ ಮಾಡಿ, ಸೇವಾ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರವನ್ನು ನೀಡುವ ಮೂಲಕ ಇನ್ನು ಎತ್ತರಕ್ಕೆ ಬೆಳೆಸುತ್ತಾ ಸಾಗುತ್ತಿದ್ದಾರೆ ಎಂದರು.

ಕಾಐಕ್ರಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಸಿ.ಸೋಮಶೇಖರ್, ಪಡಗೂರು ಅಡವಿ ಮಠಾಧ್ಯಕ್ಷ ಹಾಗೂ ಶಸಾಪ ಜಿಲ್ಲಾ ಗೌರವಾಧ್ಯಕ್ಷ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ, ಹಿರಿಯ ಸಾಹಿತಿ ಕೆ.ಸಿ. ಶಿವಪ್ಪ, ಜಿಲ್ಲಾ ಶಸಾಪ ಅಧ್ಯಕ್ಷ ವಿ.ಮಲ್ಲಿಕಾರ್ಜುನಸ್ವಾಮಿ ದುಗ್ಗಹಟ್ಟಿ, ಪ್ರಧಾನ ಕಾರ್ಯದರ್ಶಿ ಬಿ.ಕೆ.ರವಿಕುಮಾರ್, ಕಾರ್ಯದರ್ಶಿ ಬಿ.ಎಸ್.ವಿನಯ್, ನಾಗರಾಜು, ನಗರ ಘಟಕದ ಅಧ್ಯಕ್ಷ ಎಂ. ಸುಂದರ್, ತಾಲೂಕು ಅಧ್ಯಕ್ಷ ಆರ್.ಎಸ್.ಲಿಂಗರಾಜು, ಕಾರ್ಯದರ್ಶಿ ವೀರಭದ್ರಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net