

ಹಾಸನ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿ ಮಾಡುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ಜಿಲ್ಲಾ ಯೋಜನಾ ನಿರ್ದೇಶಕಿ ಮಮತಾ ಹರೀಶ್ ರಾವ್ ತಿಳಿಸಿದರು.
ನಗರದ ಅಂಬೇಡ್ಕರ್ ನಗರದಲ್ಲಿರುವ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ, ಜುಮ್ಮಾ ಮಸೀದಿ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಜ್ಞಾನದೀಪ ಕಾರ್ಯಕ್ರಮದಡಿ ಶಾಲೆಗೆ ಬೆಂಚ್ ಮತ್ತು ಡೆಸ್ಕ್ ವಿತರಣೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಎಲ್ಲಾ ಸಮುದಾಯಗಳಿಗೂ ಪ್ರಯೋಜನವಾಗಲೆಂದು ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ ಎಂದು ಹೇಳಿದರು.
ಆ ನಿಟ್ಟಿನಲ್ಲಿ ನಮ್ಮೂರು ನಮ್ಮ ಕೆರೆ ಹೂಳೆತ್ತುವ, ಹಾಲಿನ ಡೈರಿ, ಸರ್ಕಾರಿ ಶಾಲೆಗಳ ಕಟ್ಟಡದ ನಿರ್ಮಾಣಕ್ಕೆ ಸಹಾಯಧನ, ಹಿಂದು ರುದ್ರಭೂಮಿಗಳ ಅಭಿವೃದ್ಧಿ, ನಿರ್ಗತಿಕರಿಗೆ ಮಾಸಾಶನ, ರೈತರಿಗಾಗಿ ಪಂಪ್ ಸೆಟ್‌ಗೆ ಸಹಾಯಧನ, ದನದ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ, ಕುರಿ, ಹಸು ಸಾಕಾಣಿಕೆ, ಸಮಗ್ರ ಕೃಷಿ, ತೋಟಗಾರಿಕೆಗೆ ನೆರವು, ಉನ್ನತ ಶಿಕ್ಷಣಕ್ಕಾಗಿ ಮಕ್ಕಳಿಗೆ ಶಿಷ್ಯ ವೇತನ, ಶಾಲೆಗಳಿಗೆ ಬೆಂಚ್ ಮತ್ತು ಡೆಸ್ಕ್ ವಿತರಣೆ, ಹಳೆಯ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಸ್ವಸಹಾಯ ಸಂಘಗಳಿಗೆ ಬ್ಯಾಂಕುಗಳ ಮೂಲಕ ಪ್ರಗತಿನಿಧಿ ಹೀಗೆ ಹತ್ತು ಹಲವು ಕಾರ್ಯಕ್ರಮ ನೀಡುವ ಮೂಲಕ ಸಮಾಜದ ಏಳಿಗೆಗೆ ತನ್ನದೆಯಾದ ಕೊಡುಗೆಯನ್ನು ಸಂಸ್ಥೆ ನೀಡುತ್ತಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಡಾ. ನಾಯಕರಹಳ್ಳಿ ಮಂಜೇಗೌಡ ಮಾತನಾಡಿ, ಮಕ್ಕಳು ಉತ್ತಮ ಭವಿಷ್ಯವನ್ನು ಕಂಡುಕೊಳ್ಳುವಲ್ಲಿ ಹಾಗೂ ಸಕಾರಾತ್ಮಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಶಿಕ್ಷಣದ ಪಾತ್ರ ಮಹತ್ವದ್ದಾಗಿರುತ್ತದೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿ ಪೋಷಕರು ಮತ್ತು ಶಿಕ್ಷಕರ ನಡುವಿನ ಸಂಬಂಧದ ಮೇಲಿರುತ್ತದೆ. ಹೀಗಾಗಿ ಪೋಷಕರು ಹೆಚ್ಚಾಗಿ ಶಾಲೆಗಳಿಗೆ ಆಗಾಗ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಶಿಕ್ಷಕರ ಜತೆ ಸಮಾಲೋಚಿಸಬೇಕು. ಆಗ ಮಕ್ಕಳ ಸರಿ-ತಪ್ಪು, ಸಮಸ್ಯೆಗಳು ತಿಳಿದು ಅದನ್ನು ಆರಂಭದಲ್ಲೇ ಸರಿಪಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಗರ ವೃತ್ತದ ಸಂಯೋಜಕರಾದ ಬಿ.ಎ. ಮಂಜುನಾಥ್, ಮುಖ್ಯ ಶಿಕ್ಷಕರಾದ ಷನಾಜ್ ಬೇಗಂ, ಧರ್ಮಸ್ಥಳ ಸಂಘದ ಚಂದ್ರಪ್ರಭಾ, ನಗರ ಸಿಆರ್‌ಪಿಗಳಾದ ಕಾರೇಕೆರೆ ಚಂದ್ರಕಾಂತ್, ಅನಂತ್, ಎಚ್.ಆರ್. ಶೇಖರ್, ಸಮಾಜ ಸೇವಕ ಸೈಯದ್ ಸಜ್ಜಾದ್ ಪಾಷ, ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಚೈತ್ರಾ ನಾಯಕರಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಗೌರವ ಕಾರ್ಯದರ್ಶಿ ಕಲ್ಲಹಳ್ಳಿ ಹರೀಶ್, ಶಿಕ್ಷಕರಾದ ಶಬ್ರೀನ್ ಖಾನಂ, ಕುಮಾರಸ್ವಾಮಿ, ಅಮ್ಜದ್, ಮಕ್ಬಲ್ ಅಹಮದ್, ನಗರ ಸಭೆ ಮಾಜಿ ಸದಸ್ಯೆ ಶುಭಾ ದಿನೇಶ, ಜಗದೀಶ್, ರಂಗಸ್ವಾಮಿ, ಅಹಮದ್ ಇತರರು ಉಪಸ್ಥಿತರಿದ್ದರು.