

ಹಾಸನ: ಸರ್ಕಾರಿ ಶಾಲೆಗಳಲ್ಲಿ ಸ್ಥಳೀಯ ಕಲಾ ಪ್ರಕಾರಗಳು, ಸಾಹಿತ್ಯ, ಇತಿಹಾಸ, ಸಂಪನ್ಮೂಲಗಳನ್ನು ಮಕ್ಕಳ ಪಠ್ಯ ಭೋದನಾ ಕ್ರಮದೊಂದಿಗೆ ಅಳವಡಿಸಿ ಕಲಾ ಸಂಯೋಜಿತ ಕಲಿಕೆಯ ಮಹತ್ವ ಮತ್ತು ಇದರ ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣದ ಮಾರ್ಗಸೂಚಿಗಳನ್ನು ನಾವು ಕಂಡುಕೊಳ್ಳಬೇಕು ಎಂದು ಐಎಫ್‌ಎ ಸಂಸ್ಥೆಯ ಕಲಾ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ರಾಧಿಕಾ ಭಾರದ್ವಾಜ್ ಅವರು ತಿಳಿಸಿದರು.
ಜಿಲ್ಲೆಯ ನಾಲ್ಕು ತಾಲೂಕುಗಳಾದ ಹಾಸನ, ಅರಸೀಕೆರೆ, ಹೊಳೆನರಸೀಪುರ ಹಾಗೂ ಚನ್ನರಾಯಪಟ್ಟಣದಲ್ಲಿ ಡಿ.2ರಿಂದ 5ರವರೆಗೆ ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆ ಮತ್ತು ಡಿಎಸ್‌ಇಆರ್‌ಟಿ ಬೆಂಗಳೂರು ಇವರ ಕಲಾ ಯಾತ್ರೆ - ಕಲಾ ಅಂತರ್ಗತ ಕಲಿಕೆಯ ಪರಿಚಯ ಮತ್ತು ಪ್ರಾತ್ಯಕ್ಷಿಕೆ ನಡೆಯಿತು.
ಈ ಪ್ರಾತ್ಯಕ್ಷಿಕೆ ಉದ್ಘಾಟನೆಯನ್ನು ಹಾಸನದ ವಾಣಿವಿಲಾಸ ಸ.ಹಿ.ಪ್ರಾ ಶಾಲೆಯಲ್ಲಿ ನೆರವೇರಿಸಿ ಅವರು ಮಾತನಾಡಿದರು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಕ್ಷೇತ್ರ ಸಮನ್ವಯಾಧಿಕಾರಿ ಲಿಲ್ಲಿ ಡಯಾನಾ, ಶಾಲೆಯ ಮುಖ್ಯ ಶಿಕ್ಷಕರು ಮತ್ತು ಐಎಫ್‌ಎ ತಂಡದ ಸಂಪನ್ಮೂಲ ಸದಸ್ಯರಾದ ಭಾರತಿ ಕೊಪ್ಪ, ರಂಗನಾಥ್, ಅಣ್ಣಪ್ಪ, ಪ್ರಶಾಂತ್, ರಾಜಶೇಖರ್, ಶಿವಕ್ಕ ಅವರು ಉಪಸ್ಥಿತರಿದ್ದರು.