ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶಿಸ್ತು, ಗಟ್ಟಿತನವಿದೆ

12 ckm 4
ಚಿಕ್ಕಮಗಳೂರು ಬೇಲೂರು ರಸ್ತೆ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ, ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ಸಿ.ಟಿ.ರವಿ, ಕಾಲೇಜಿನ ಪ್ರಾಚಾರ್ಯ ಜಿ.ಬಿ.ವಿರೂಪಾಕ್ಷ , ಚಟ್ನಳ್ಳಿ ಮಹೇಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶಿಸ್ತು, ಸಂಯಮ ಹಾಗೂ ಗಟ್ಟಿತನದಿಂದ ಕೂಡಿದ್ದಾರೆ. ಅಂಕಗಳಿಕೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡಾಸಕ್ತಿಯಲ್ಲಿ ತೊಡಗಿಸಿಕೊಂಡು ಹೆಚ್ಚಿನ ಸಾಮರ್ಥ್ಯವನ್ನು ಗಳಿಸಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ನಗರದ ಬೇಲೂರು ರಸ್ತೆ ಸಮೀಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ, ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಹಪಠ್ಯವು ವಿದ್ಯಾರ್ಥಿ ಜೀವನದಲ್ಲಿ ಕೌಶಲ್ಯ ಹಾಗೂ ಮೌಲ್ಯಗಳನ್ನು ತಿಳಿಸಿಕೊಡಲಿದೆ. ಪಠ್ಯದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಯು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಲಿದೆ. ಜೊತೆಗೆ ಭವಿಷ್ಯದಲ್ಲಿ ಶಿಸ್ತಿನ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ನಾಟಿ ಹಣ್ಣಿನಂತೆ ಸಿಹಿಜಾಸ್ತಿ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಪೂರೈಸಿದಂಥ ವಿಶ್ವೇಶ್ವರಯ್ಯ, ಅಬ್ದುಲ್‌ಕಲಾಂ ಸೇರಿದಂತೆ ಅನೇಕ ಗಣ್ಯಮಾನ್ಯರು ಜನಸಾಮಾನದಲ್ಲಿ ನೆಲೆಯೂರಲು ಸರ್ಕಾರಿ ಶಾಲೆಗಳೇ ಮೂಲಕಾರಣ. ಹೀಗಾಗಿ ಶಾಲೆಯ ಬಗ್ಗೆ ಕೀಳರಿಮೆ ಹೊಂದದೇ ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.

ಇತ್ತೀಚೆಗೆ ಪದವಿ ಕಾಲೇಜಿನ ವಿಜ್ಞಾನ ವಿಷಯದಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆ ಕಾಲೇಜಿನ ಪ್ರಾಚಾರ್ಯರು ಹಾಗೂ ಪದವಿಪೂರ್ವ ಉಪನಿರ್ದೇಶಕರು ಹೆಚ್ಚು ಮುತುವರ್ಜಿ ವಹಿಸಬೇಕು. ಸರ್ಕಾರವು ವಿದ್ಯಾರ್ಥಿಗಳಿಗೆ ಸವಲತ್ತು ನೀಡಿ ಪ್ರೋತ್ಸಾಹಿಸುತ್ತಿದ್ದು ಅಧಿಕಾರಿಗಳು ಮಕ್ಕಳ ಸೇರ್ಪಡೆ ಬಗ್ಗೆ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಅನ್ನದಾನ ಬದುಕಿಗೆ, ರಕ್ತದಾನ ಜೀವನಕ್ಕೆ ಪೂರಕ. ಅದರಂತೆ ವಿದ್ಯಾದಾನ ಮಕ್ಕಳ ಭವಿಷ್ಯದ ನಿರ್ಮಾಣಕ್ಕೆ ಬುನಾದಿ. ಕಲಿಕೆ ವೇಳೆಯಲ್ಲಿ ಮಕ್ಕಳು ಸಮಯ ವ್ಯರ್ಥಗೊಳಿಸಿದರೆ ಜೀವನಪೂರ್ತಿ ಪರಿತಪಿಸಬೇಕಾಗುತ್ತದೆ. ಹೀಗಾಗಿ ವ್ಯಾಸಂಗದಲ್ಲಿ ಮೈಮರೆಯದೇ ಹೆಚ್ಚು ಪರಿಶ್ರಮ ವಹಿಸಬೇಕು ಎಂದರು.

ಮಕ್ಕಳ ಬದುಕಿನಲ್ಲಿ ವಿದ್ಯಾಭ್ಯಾಸ ಎಂದಿಗೂ ಮುಕ್ಕಾಲಾಗಿರಬೇಕು. ವಿನಯ, ವಿವೇಕದಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಶ್ರೀಮಂತಿಕೆ ಜೊತೆಗೆ ಸರಳತೆ ಹಾಗೂ ದಾನದ ಮನೋಭಾವ ಇರಬೇಕು. ಭವಿಷ್ಯದಲ್ಲಿ ಶ್ರೀಮಂತಿಕೆಗಿAತ ಹೆಚ್ಚು ಸರಳತೆಗೆ ನೂರಪಟ್ಟು ಸ್ಥಾನ ಲಭಿಸಲು ಸಾಧ್ಯ ಎಂದು ಹೇಳಿದರು.

ಶಾಲೆಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹಿಂದಿನ ಅವಧಿಯಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಅಲ್ಲದೇ ಶೌಚಗೃಹ ಸೇರಿದಂತೆ ಇನ್ನಿತರೆ ಕಾಮಗಾರಿಗೆ ಟೆಂಡರ್ ಕರೆದು ಅನುದಾನ ಮಂಜೂರು ಮಾಡಲಾಗಿದೆ. ಇದೀಗ ಶಂಕುಸ್ಥಾಪನೆ ನೆರವೇರುತ್ತಿದೆ. ಸದ್ಯದಲ್ಲೇ ತಾವು ಕೂಡಾ ಹೆಚ್ಚಿನ ಶ್ರಮವಹಿಸಿ ಶಾಲೆಯ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.

ಕಾಲೇಜಿನ ಪ್ರಾಚಾರ್ಯ ಜಿ.ಬಿ.ವಿರೂಪಾಕ್ಷ ಮಾತನಾಡಿ, ಪ್ರಸ್ತುತ ಕಾಲೇಜಿನಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಒದಗಿಸಿ ಸಜ್ಜುಗೊಳಿಸಿದ ಪರಿಣಾಮ ಪ್ರತಿವರ್ಷವು ಕಾಲೇಜು ಶೇ. ೯೭ರಷ್ಟು ಫಲಿತಾಂಶ ಪಡೆದುಕೊಂಡು ಸಮಾಜದ ಮುಂಚೂಣಿಯಲಿದ್ದು ಮುಂದಿನ ವಾರ್ಷಿಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಅಣಿಯಾಗಿ ಕಾಲೇಜಿಗೆ ಕೀರ್ತಿ ತರಬೇಕು ಎಂದು ಹೇಳಿದರು.

ಕಾಲೇಜು ಸಣ್ಣಪುಟ್ಟ ಅಭಿವೃದ್ಧಿ ವಿಚಾರದಲ್ಲಿ ಹಿಂದಿರುವ ಕಾರಣ ಹಾಲಿ ಹಾಗೂ ಮಾಜಿ ಶಾಸಕರು ಇತ್ತ ಗಮನಹರಿಸಬೇಕು. ಶೌಚಗೃಹ, ಕೊಠಡಿಗಳ ಕೊರತೆಯಿದೆ. ಇನ್ನಷ್ಟು ಹೆಚ್ಚು ಸೌಲಭ್ಯಗಳನ್ನು ಕಾಲೇಜಿಗೆ ದೊರಕಿಕೊಟ್ಟಲ್ಲಿ ಮತ್ತಷ್ಟು ಸಾಧನೆ ಮಾಡಬಹುದು ಎಂದರು.

ವಾಗ್ಮಿ ಚಟ್ನಳ್ಳಿ ಮಹೇಶ್ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳಿಗೆ ಸನ್ನಡತೆ ಬೀಜ ಬಿತ್ತಬೇಕು. ತ್ರಿಮೂರ್ತಿ ಸಂಕೇತ ಗುರುಗಳಿಗೆ ಗೌರವಿಸುವ ಸದ್ಗುಣ ತುಂಬಬೇಕು. ಕಲೆ, ಸಂಸ್ಕೃತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾಲೇಜಿನ ಉಪನ್ಯಾಸಕರು ಮುತುವರ್ಜಿ ವಹಿಸಿ ಸಾಂಸ್ಕೃತಿಕ ಚಟುವಟಿಕೆಯನ್ನು ಎತ್ತಿಹಿಡಿಯಬೇಕು ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಮಾರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಾನಾಯ್ಕ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಫೀಕ್ ಅಹಮ್ಮದ್, ಸದಸ್ಯರಾದ ಬಿ.ಬಿ.ಪ್ರಜ್ವಲ್, ಸೀತಾರಾಮನ್, ಎಂ.ಸಿ.ಸುರೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net