

ಮೈಸೂರು: ರಾಜ್ಯದಲ್ಲಿ 6200 ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದನ್ನು ವಿರೋಧಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯಿಂದ ಶನಿವಾರ ನಗರದ ಗಾಂಧಿ ಚೌಕದ ಬಳಿ ಸಾರ್ವಜನಿಕರಿಂದ ಸಹಿ ಸಂಗ್ರಹಿಸಲಾಯಿತು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಿತಿನ್ ಮಾತನಾಡಿ, ರಾಜ್ಯ ಸರ್ಕಾರ ಕಡಿಮೆ ದಾಖಲಾತಿ ಹೆಸರಿನಲ್ಲಿ 6,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ.
ಅದರಲ್ಲಿ ಮೈಸೂರಿನಲ್ಲಿ ಮುಚ್ಚುತ್ತಿರುವ ಶಾಲೆಗಳ ಸಂಖ್ಯೆ 891. ಸರ್ಕಾರಿ ಶಾಲೆಗಳು ಬಡಜನರ ಮಕ್ಕಳ ಶಿಕ್ಷಣದ ಆಶಾಕಿರಣ. ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯದ ಅಡಿಪಾಯ. ಈ ಶಾಲೆಗಳಿಗೆ ಶಿಕ್ಷಣದ ಕನಸು ಹೊತ್ತು ಬರುವವರು ಬಹುತೇಕ ಬಡವರು, ರೈತ-ಕಾರ್ಮಿಕರ ಮಕ್ಕಳು. ಅಂತಹ ಸರ್ಕಾರಿ ಶಾಲೆಗಳ ಇಂದಿನ ಪರಿಸ್ಥಿತಿ ಬಹಳ ಶೋಚನೀಯ ಹಾಗೂ ಚಿಂತಾಜನಕವಾಗಿದೆ ಎಂದರು.
ರಾಜ್ಯದಲ್ಲಿ ಅಂದಾಜು 6000 ಏಕೋಪಾಧ್ಯಾಯ ಶಾಲೆಗಳಿವೆ. 3500ಕ್ಕೂ ಹೆಚ್ಚು ಶಾಲೆಗಳಲ್ಲಿ ಬಳಕೆಗೆ ಯೋಗ್ಯ ಶೌಚಗೃಹ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹಲವು ಶಾಲೆಗಳ ಕಟ್ಟಡಗಳು ವರ್ಷಗಳಿಂದ ದುರಸ್ತಿ ಕಾಣದೆ ಚಾವಣಿಗಳು ಸೋರುತ್ತಿವೆ.
ಎಲ್ಲದಕ್ಕಿಂತ ಮುಖ್ಯವಾಗಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 59,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. 29 ಸಾವಿರಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳು ಶಿಥಿಲಗೊಂಡು ಬೀಳುವ ಹಂತದಲ್ಲಿವೆ. ಸರ್ಕಾರದ ಬೇಜವಾಬ್ದಾರಿತನದಿಂದ ಹಲವು ವರ್ಷಗಳಿಂದ ದುರಸ್ತಿ ಕಾಣದ ಶಾಲೆಗಳ ಚಾವಣಿ ಕುಸಿದು ಮಕ್ಕಳು ಗಾಯಗೊಂಡಿರುವುದು, ಪ್ರಾಣ ಕಳೆದುಕೊಂಡಿರುವುದಂತೂ ಹೃದಯವಿದ್ರಾವಕ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಯಾವ ಗಂಭೀರ ಸಮಸ್ಯೆಗಳನ್ನೂ ಪರಿಹರಿಸದೇ, ಕಡಿಮೆ ದಾಖಲಾತಿ ಹೆಸರಲ್ಲಿ ಶಾಲೆಗಳನ್ನು ಮುಚ್ಚುತ್ತಿರುವುದು ಬಡವರ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣವನ್ನು ಕಿತ್ತುಕೊಳ್ಳುವ ಹುನ್ನಾರವಾಗಿದೆ ಎಂದು ಕಿಡಿಕಾರಿದರು.
ಸರ್ಕಾರವು ತನ್ನ ಈ ಅವೈಜ್ಞಾನಿಕ ಮತ್ತು ಅಪ್ರಜಾತಾಂತ್ರಿಕ ಜನ ವಿರೋಧಿ ನಿರ್ಧಾರವನ್ನು ಕೈಬಿಡಬೇಕು. ಕೂಡಲೇ ಹಾಜರಾತಿ ಕಡಿಮೆ ಇರುವ ಶಾಲೆಗಳನ್ನು ಮುಚ್ಚುವ ಬದಲು ಅವಶ್ಯಕ ಮೂಲ ಸೌಲಭ್ಯಗಳನ್ನು ನೀಡಿ ಅಭಿವೃದ್ಧಿಪಡಿಸಿ ರಕ್ಷಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ, ಪದಾಧಿಕಾರಿಗಳಾದ ಹೇಮಾ, ಚಂದನ, ಚಂದ್ರಿಕಾ, ದಿಶಾ ಅಂಜಲಿ ನಂದೀಶ್ ಮತ್ತು ವಿದ್ಯಾರ್ಥಿಗಳಾದ ಅಭಿಷೇಕ್ , ಆರತಿ, ಚೆಲುವರಾಜ್, ಆನಂದ್, ರಕ್ಷಿತಾ ದೀಕ್ಷಾ ಭಾಗವಹಿಸಿದ್ದರು.