ಸರ್ಕಾರಿ ಶಾಲೆ ಮುಚ್ಚುವ ಕ್ರಮ ಅವೈಜ್ಞಾನಿಕ

Sene
Published on

ಚಿತ್ರದುರ್ಗ: ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳನ್ನು ಶಾಶ್ವತವಾಗಿ ಮುಚ್ಚಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಮಕ್ಕಳ ಹಾಜರಾತಿ ಕಡಿಮೆಯ ಕಾರಣ ಮುಂದಿಟ್ಡುಕೊಂಡು ವಿಲೀನದ ಹೆಸರಿನಲ್ಲಿ ಮಾತೃಭಾಷೆ ಕಲಿಕೆಯ ಕೇಂದ್ರಗಳಾಗಿರುವ ಶಾಲೆಗಳನ್ನು ಮುಚ್ಚಿರುವ ಕ್ರಮ ದುರಂತ. ಮರುಪರಿಶೀಲಿಸಿ ತೆರೆಯಬೇಕು ಎಂದು ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ರಾಜ್ಯದ ಬಹುತೇಕ ಗಡಿ ಭಾಗದ ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ರಾಯಚೂರು, ಕಲಬುರ್ಗಿ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಸೇರಿ ಇತರೆ ಜಿಲ್ಲೆಗಳಲ್ಲೇ ಅತಿ ಹೆಚ್ಚು ಶಾಲೆ ಮುಚ್ಚಲಾಗಿದೆ. ಗಡಿ ಭಾಗಗಳು ಭಾಷಾವಾರು ಪ್ರಾಂತ್ಯಗಳ ರಚನೆ ಆದಾಗಿನಿಂದಲೂ ಒಂದಿಲ್ಲೊಂದು ಕಾರಣದಿಂದಾಗಿ ಭಾಷಾ ಸಂಘರ್ಷ ಕೇಂದ್ರಗಳಾಗಿ ಮಾರ್ಪಟ್ಟಿವೆ. ಈ ಸೂಕ್ಷ್ಮ್ಮತೆ ಸರ್ಕಾರವೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ಶಿಕ್ಷಣ ಇಲಾಖೆ ಮಾಹಿತಿ ಅನ್ವಯ ಕಿತ್ತೂರು ಕರ್ನಾಟಕದ ಶೈಕ್ಷಣಿಕ ವಿಭಾಗ ಒಂದರಲ್ಲೇ ಈಗಾಗಲೇ 64 ಶಾಲೆಗಳನ್ನು ಮುಚ್ಚಲಾಗಿದೆ. 584 ಶಾಲೆಗಳು ಮುಚ್ಚುವ ಹಂತದಲ್ಲಿವೆ. ಇದೇ ಪರಿಸ್ಥಿತಿ ಇತರೆಡೆಗಳಲ್ಲೂ ನಿರ್ಮಾಣವಾಗಿದೆ. ಇದಕ್ಕೆ ಶಾಲಾ ದಾಖಲಾತಿ ಎಂಬ ಅವೈಜ್ಞಾನಿಕ ನಿಯಮ, ಸರ್ಕಾರದ ಕೆಲ ನಿರ್ಧಾರಗಳೇ ಕಾರಣ ಎಂದು ಆರೋಪಿಸಿದರು.

ಸರ್ಕಾರ ಮಾತೃಭಾಷೆಗೆ ಬಲವಾದ ಕೊಡಲಿ ಪೆಟ್ಟು ನೀಡಿದೆ. ಗಡಿ ಭಾಗಗಳಲ್ಲೂ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಶಾಲೆಗಳಿದ್ದು, ದನಗಳ ಕೊಟ್ಟಿಗೆಗಿಂತಲೂ ಕಡೆಯಾಗಿ ಶಿಥಿಲಾವಸ್ಥೆಯಲ್ಲಿವೆ. ಮಕ್ಕಳ ಸುಗಮ ಸಂಚಾರಕ್ಕೆ ಯೋಗ್ಯ ರಸ್ತೆಗಳಿಲ್ಲ. ಜ್ಞಾನ ದೇಗುಲಗಳಾದ ಶಾಲೆಗಳನ್ನು ಮುಚ್ಚುವ ಬದಲು ಖಾಸಗಿಗಿಂತಲೂ ಅಗತ್ಯ ಮೂಲಸೌಕರ್ಯದೊಂದಿಗೆ ಅಭಿವೃದ್ಧಿಗೆ ಮುಂದಾದರೆ, ದಾಖಲಾತಿ ತನ್ನಿಂತಾನೆ ಹೆಚ್ಚಾಗಲಿದೆ. ಸರ್ಕಾರ ಈ ಕುರಿತು ಗಂಭೀರ ಚಿಂತನೆ ನಡೆಸಬೇಕು ಎಂದು ಕೋರಿದರು.

ಸೇನೆ ಜಿಲ್ಲಾ ಅಧ್ಯಕ್ಷ ಎಂ.ತಿಪ್ಪೇಸ್ವಾಮಿ, ಪದಾಧಿಕಾರಿಗಳಾದ ಶಿವಣ್ಣ, ವಿಜಯಲಕ್ಷ್ಮಿ, ಎಂ.ಡಿ.ಶರೀಫ್, ಪ್ರವೀಣ್, ಶಿವರಾಜ್, ಎಂ.ಮಂಜುನಾಥ್, ಅನಿಲ್, ರಾಮ್, ಚೌಡೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net