

ಮೂಡಿಗೆರೆ: ಸರ್ಕಾರಿ ಶಾಲೆಗಳಲ್ಲಿ ಬಡವರ ಮಕ್ಕಳು ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಾರೆ. ಸಂಘ-ಸಂಸ್ಥೆಗಳು ಅಂಥ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಿದರೆ ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಅನಸೂಯಾ ಹೇಳಿದರು.
ಬಾಲಕಿಯರ ಪ್ರೌಢಶಾಲೆಯ ಪ್ರತಿಭಾನ್ವಿತ 9 ವಿದ್ಯಾರ್ಥಿಗಳಿಗೆ ಶನಿವಾರ ಜೆಸಿಐನಿಂದ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರ ಮಕ್ಕಳು ಶೈಕ್ಷಣಿಕ ಸಾಮಗ್ರಿ ಖರೀದಿಸಿಕೊಳ್ಳಲು ಸಾಧ್ಯವಾಗದೆ ತೀರ ಸಂಕಷ್ಟ ಅನುಭವಿಸುತ್ತಾರೆ. ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ ಸೇರಿದಂತೆ ಅನೇಕ ರೀತಿಯ ಸವಲತ್ತುಗಳನ್ನು ಒದಗಿಸಿದರೂ ಇನ್ನಷ್ಟು ಸವಲತ್ತುಗಳು ಬೇಕಾಗಿರುವ ಕಾರಣ ವಿದ್ಯಾರ್ಥಿಗಳು ಅವೆಲ್ಲವನ್ನೂ ಹೊಂದಿಸಿಕೊಳ್ಳಲು ಪಾಲಕರ ಬಳಿ ದುಂಬಾಲು ಬೀಳಬೇಕಾಗುತ್ತದೆ. ಕೂಲಿ ಕೆಲಸದಿಂದ ಬಂದ ಹಣದಲ್ಲಿ ಕಷ್ಟಕರವಾದ ಜೀವನ ನಡೆಸುತ್ತಿರುವ ಪಾಲಕರು ಮಕ್ಕಳಿಗೆ ಎಲ್ಲ ಸವಲತ್ತುಗಳನ್ನು ಖರೀದಿಸಿಕೊಡಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಾರೆ. ಸಂಘ-ಸಂಸ್ಥೆಗಳು ಮತ್ತು ದಾನಿಗಳು ಬಡವರ್ಗದ ಕುಟುಂಬದ ಮಕ್ಕಳನ್ನು ಗುರುತಿಸಿ ಶೈಕ್ಷಣಿಕವಾಗಿ ಸಹಾಯ ಮಾಡಿದರೆ ಮಕ್ಕಳ ಕಲಿಕೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಜೆಸಿಐ ಅಧ್ಯಕ್ಷ ಸುಪ್ರೀತ್ ಕಾರ್ಬೈಲ್ ಮಾತನಾಡಿ, ಜೆಸಿಐನಿಂದ ಮಕ್ಕಳಿಗೆ ವಿವಿಧ ರೀತಿಯ ಸವಲತ್ತುಗಳನ್ನು ಪ್ರತಿವರ್ಷ ಒದಗಿಸಿ ಕೊಡುತ್ತಿದ್ದೇವೆ ಎಂದರು.
ಎಂ.ಡಿ.ವಿಜಯಕುಮಾರ್, ಸುದೀಪ್, ವಿಶ್ವ ಕುಮಾರ್, ಪ್ರದೀಪ್, ಜೆಸಿಐ ಯುವ ಮಾಣಿಕ್ಯದ ಅಧ್ಯಕ್ಷ ಮೊಹಮ್ಮದ್, ಶಿಕ್ಷಕಿ ಸುನೀತಾ ಇತರರಿದ್ದರು.