ಸರ್ಕಾರಿ ಶಾಲೆ ಪ್ರಗತಿಗೆ ಸಹಕರಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಧ್ವನಿ ಸಂಘಟನೆ ಅಧ್ಯಕ್ಷ ಮಲ್ಲೇಶ್ ಸಲಹೆ

23 Nela Ph 01 Book Vitharane
Published on

ನೆಲಮಂಗಲ: ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಜತೆಗೆ ಸಂಘ-ಸಂಸ್ಥೆಗಳ ಸಹಕಾರ ಅಗತ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಧ್ವನಿ ಸಂಘಟನೆ ಅಧ್ಯಕ್ಷ ಮಲ್ಲೇಶ್ ತಿಳಿಸಿದರು.

ನಗರಸಭೆ ವ್ಯಾಪ್ತಿಯ ಲೋಹಿತ್‌ನಗರ ಸರ್ಕಾರಿ ಶಾಲೆ ಅವರಣದಲ್ಲಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಧ್ವನಿ ಸಂಘಟನೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಉಚಿತವಾಗಿ ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡುವ ಏಕೈಕ ಸ್ಥಳ ಶಾಲೆಯಾಗಿದೆ. ಶಾಲೆಯೊಂದು ದೇವಸ್ಥಾನವಿದ್ದಂತೆ ಪ್ರತಿಯೊಬ್ಬರೂ ಗೌರವಿಸಬೇಕು. ಸಂಘಟನೆಯಿಂದ ನೂರಾರು ಸಮಾಜ ಮುಖಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಬಾರಿ ಮಕ್ಕಳ ಶೈಕ್ಷಣಿಕ ಪ್ರಗತಿ ಉದ್ದೇಶದಿಂದ ನೋಟ್‌ಬುಕ್ ವಿತರಣೆ ಮಾಡಲಾಗುತ್ತಿದೆ. ತಾಲೂಕಿನಾದ್ಯಂತ ನೂರಾರು ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದರು.

ಕರವೇ ತಾಲೂಕು ಘಟಕದ ಅಧ್ಯಕ್ಷ ಕನ್ನಡ ರೆಹಮಾನ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಲಕ್ಷಾಂತ ಮಂದಿ ಉನ್ನತ್ತ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಉಳಿಸುವ ಕೆಲಸ ಸರ್ಕಾರಿ ಶಾಲೆಯಲ್ಲಿ ಆಗುತ್ತಿದೆ. ಸರ್ಕಾರಿ ಶಾಲೆ ಮಕ್ಕಳಲ್ಲಿ ಸಾಕಷ್ಟು ಕೌಶಲವಿದ್ದು, ಪ್ರತಿಭೆ ಹೊರ ತರುವ ಕೆಲಸ ಪ್ರತಿಯೊಬ್ಬರೂ ಮಾಡಬೇಕಿದೆ. ಮಕ್ಕಳ ಅನುಕೂಲಕ್ಕಾಗಿ ಸೇವೆ ಮಾಡುತ್ತಿರುವ ಸಂಘಟನೆ ಕಾರ್ಯ ಶ್ಲಾಘನೀಯ ಎಂದರು.

120ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಲಾ 5 ನೋಟ್‌ಬುಕ್ ಹಾಗೂ ಕಲಿಕಸಾಮಗ್ರಿ ವಿತರಣೆ ಮಾಡಲಾಗಿದೆ. ಜತೆಗೆ ಶಾಲೆಯ 3ಮಂದಿ ಬಡ ವಿದ್ಯಾರ್ಥಿಗಳನ್ನು ಸಂಘಟನೆಯಿಮದ ದತ್ತು ಸ್ವೀಕರಿಸಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲಾಗುವುದು ಎಂದು ಸಂಘಟನೆ ತಾಲೂಕು ಅಧ್ಯಕ್ಷ ಪ್ರಶಾಂತ್ ತಿಳಿಸಿದರು.

ಸಂಘಟನೆ ಉಪಾಧ್ಯಕ್ಷ ರವಿಕುಮಾರ್, ನಗರ ಘಟಕದ ಅಧ್ಯಕ್ಷ ಪುನೀತ್‌ಕುಮಾರ್, ಯಲಹಂಕ ಕ್ಷೇತ್ರ ಅಧ್ಯಕ್ಷ ಮಂಜುನಾಥ್, ಕಾರ್ಮಿಕ ಘಟಕ ಅಧ್ಯಕ ಪುನೀತ್, ಉಪಾಧ್ಯಕ್ಷ ದರ್ಶನ್, ಸದಸ್ಯ ರಾಕೇಶ್, ವಿನಯ್, ಕಾಂಗ್ರೇಸ್ ಅಸಂಘಟಿಕ ಕಾರ್ಮಿಕ ಘಟಕ ಜಿಲ್ಲಾಪ್ರಧಾನ ಕಾರ್ಯದರ್ಶಿ ಕನಕರಾಜು, ಮುಖಂಡ ಎಂ.ಎನ್.ರವಿಕುಮಾರ್, ಅನಂದ್‌ಮೌರ್ಯ, ಮುಖ್ಯಶಿಕ್ಷಕ ರಂಗಸ್ವಾಮಿ, ಶಿಕ್ಷಕಿ ಹೇಮಲತಾ, ಗಂಗಮ್ಮ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net