ಸರ್ಕಾರಿ ಶಾಲೆ, ದೇಗುಲಗಳಿಗೆ ಡಿಸಿ ಭೇಟಿ

19- 1A
Published on

ಹೊಳೆನರಸೀಪುರ: ಜಿಲ್ಲಾಧಿಕಾರಿ ಲತಾಕುಮಾರಿ ಮಂಗಳವಾರ ತಾಲೂಕಿಗೆ ಭೇಟಿ ನೀಡಿ ಕೆಲವು ಸರ್ಕಾರಿ ಶಾಲೆಗಳು, ಮುಜರಾಯಿ ಇಲಾಖೆ ದೇವಾಲಯಗಳು, ಶ್ರೀರಾಮ ದೇವರ ಅಣೆಕಟ್ಟೆ, ಹಂಗರಹಳ್ಳಿ ಮತ್ತು ಚನ್ನರಾಯಪಟ್ಟಣಕ್ಕೆ ತೆರಳುವ ಮಾರ್ಗಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದರು.

ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನದಿ ದಡದಲ್ಲಿ ನಿರ್ಮಾಣಗೊಂಡಿರುವ ಅಯ್ಯಪ್ಪ ಸ್ವಾಮಿ ದೇವಾಲಯ, ಲಕ್ಷ್ಮಣೇಶ್ವರ ದೇವಾಲಯ, ನರಸಿಂಹ ಸ್ವಾಮಿ ದೇವಾಲಯ, ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ ದೇವಸ್ಥಾನ ವೀಕ್ಷಣೆ ಮಾಡಿ ದರ್ಶನ ಪಡೆದರು.

ಹಳೆಕೋಟೆ ಹೋಬಳಿ ಉದ್ಯಮಿ ನ್ಯಾಮನಹಳ್ಳಿ ಅನಂತ ಕುಮಾರ್ ಅವರು ದತ್ತು ಪಡೆದಿರುವ ಹಂಗರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಪರೀಕ್ಷಿಸಿದರು. ಎಸ್‌ಡಿಎಂಸಿ ಸದಸ್ಯರು, ಅಧ್ಯಕ್ಷರ ಸಹಕಾರದಿಂದ ಶಾಲೆ ಉತ್ತಮವಾಗಿ ನಡೆಯುತ್ತಿದೆ. ಶಾಲೆಯ ಸುತ್ತ ನರೇಗಾ ಯೋಜನೆಯಡಿ ಕಾಂಪೌಂಡ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಕ್ಕದಲ್ಲಿದ್ದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಸ್ವಚ್ಛತೆ, ಮಕ್ಕಳು ಸೇವಿಸುವ ಆಹಾರ ಪದಾರ್ಥ, ಕಟ್ಟಡ ಪರಿಶೀಲಿಸಿದರು. ಶ್ರೀರಾಮ ದೇವರ ಹಳೆಯ ಮತ್ತು ನೂತನವಾಗಿ ಕಟ್ಟಿರುವ ಅಣೆಕಟ್ಟೆ ವೀಕ್ಷಿಸಿದರು. ಹೇಮಾವತಿ ನದಿಗೆ ಪಟ್ಟಣದ ಕೊಳಚೆ ನೀರು ಹರಿಯುತ್ತಿದ್ದು ಇದರಿಂದ ಜನ ಜಾನುವಾರುಗಳು, ಜಲಚರಗಳಿಗೆ ತೊಂದರೆಯಾಗುತ್ತಿದೆ ಇದನ್ನು ತಡೆಗಟ್ಟಬೇಕೆಂದು ಸ್ಥಳೀಯರು ಮನವಿ ಮಾಡಿದರು.

ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿ-373ರ ರಸ್ತೆಯ ರೈಲ್ವೆ ಮೇಲ್ಸೇತುವೆ ಹಾಗೂ ಹೊಳೆನರಸೀಪುರದಿಂದ ಚನ್ನರಾಯಪಟ್ಟಣಕ್ಕೆ ತೆರಳುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು ತ್ವರಿತವಾಗಿ ಪೂರ್ಣಗೊಳಿಸುವಂತೆ ರೈಲ್ವೆ ಇಂಜಿನಿಯರ್‌ಗೆ ಸೂಚಿಸಿದರು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಕೆಲಸ ವಿಳಂಬವಾಗದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಬಳಿಕ ತಾಲೂಕು ಕಚೇರಿಗೆ ತೆರಳಿ ಕಂದಾಯ ಇಲಾಖೆಗಳ ಗಣಕೀಕರಣ ಕಾರ್ಯವನ್ನು ಪರಿಶೀಲಿಸಿದರು. ದಾಖಲೆಗಳ ಶೇಖರಣೆ ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಗಣಕೀಕೃತ ಸಿಬ್ಬಂದಿಯನ್ನು ಶ್ಲಾಘಿಸಿದರು. ತಾಲೂಕು ಕಚೇರಿ ಪಕ್ಕದಲ್ಲಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಸಾರ್ವಜನಿಕ ಸಮುದಾಯ ಭವನವನ್ನು ತೆರವುಗೊಳಿಸಬೇಕು. ರಸ್ತೆಗೆ ನೇರವಾಗಿ ಕಟ್ಟಿರುವ ಗೋಡೆಯನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಬಾಗಿವಾಳು ಮಂಜೇಗೌಡ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ, ಎನ್.ಆರ್.ಮುತ್ತುರಾಜ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸ್ಥಳದಲ್ಲಿದ್ದ ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ತಹಸೀಲ್ದಾರ್ ವೈ.ಎಂ.ರೇಣು ಕುಮಾರ್ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಹೇಳಿದರು.

ಬಿಇಒ ಸೋಮ ಲಿಂಗೇಗೌಡ, ಪರಿಸರ ಇಂಜಿನಿಯರ್ ರುಚಿ ದರ್ಶಿನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net