

ಎನ್.ಆರ್.ಪುರ: ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಅನ್ನು ಪಟ್ಟಣ ಪಂಚಾಯಿತಿಯಿಂದ ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಲು ಬಜೆಟ್‌ನಲ್ಲಿ ಸೇರಿಸಬೇಕು. ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಸದಸ್ಯ ಜುಬೇದಾ ಸಲಹೆ ನೀಡಿದರು.
ಪಪಂನಲ್ಲಿ ಸೋಮವಾರ ನಡೆದ 2025ನೇ ಸಾಲಿನ ಬಜೆಟ್ ತಯಾರಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹಿಂದಿನ ಸಾಲಿನಲ್ಲಿ ಜಾರಿಗೆ ತಂದಿದ್ದ ಎಲ್ಲ ಯೋಜನೆಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು. ಬಡವರ ಕುಟುಂಬದವರು ಮೃತಪಟ್ಟರೆ ಶವಸಂಸ್ಕಾರಕ್ಕೆ ಅನುದಾನ ನೀಡುವುದನ್ನು ಮುಂದುವರಿಸಬೇಕು. ಬಡವರ್ಗದ ಎಲ್ಲ ಸಮುದಾಯದ ಹೆಣ್ಣುಮಕ್ಕಳ ವಿವಾಹಕ್ಕೆ ಸ್ವಲ್ಪಮಟ್ಟಿನ ಆರ್ಥಿಕ ಸಹಾಯ ನೀಡಲು ಅನುದಾನ ಮೀಸಲಿಡಬೇಕು ಎಂದು ಪ್ರಶಾಂತ್ ಎಲ್.ಶೆಟ್ಟಿ ಸಲಹೆ ತಿಳಿಸಿದರು.
ಮಹಿಳೆಯರು ಸ್ವ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಪಪಂನಿಂದ ತರಬೇತಿ ನೀಡಲು ಅನುದಾನ ಮೀಸಲಿಡುವಂತೆ ಸದಸ್ಯೆ ಜುಬೇದಾ ಹೇಳಿದರು.
ವರ್ತಕರ ಸಂಘದ ಅಧ್ಯಕ್ಷ ಎಸ್.ಎಸ್.ಜಗದೀಶ್ ಮಾತನಾಡಿ, ಪಟ್ಟಣದ ಬಸ್ ನಿಲ್ದಾಣವನ್ನು ನವೀಕರಿಸಲು ಆದ್ಯತೆ ನೀಡಬೇಕು. ಬಸ್ ನಿಲ್ದಾಣದ ಹೋಟೆಲ್‌ನ ನೀರು ದೊಡ್ಡಿಯ ಸ್ಥಳದಲ್ಲಿ ಸಂಗ್ರಹವಾಗುತ್ತಿದ್ದು, ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕು. ಪಟ್ಟಣವನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಯಾವುದೇ ಯೋಜನೆ ಜಾರಿಗೆ ತಂದರೂ ವರ್ತಕರ ಸಂಘದಿಂದ ಸಹಕಾರ ನೀಡಲಾಗುವುದು. ಎಲ್ಲ ವರ್ತಕರೂ ಅಂಗಡಿ ಪರವಾನಗಿಯನ್ನು ಪಡೆದು ಸಹಕರಿಸಲಾಗುವುದು. ಬಾಡಿಗೆ ಕಟ್ಟಡದಲ್ಲಿರುವ ಅಂಗಡಿಗಳಿಗೆ ಮಾಲೀಕರು ಕಂದಾಯ ಪಾವತಿಸದೆ ಇದ್ದಾಗ ಪರವಾನಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಸೂಚಿಸಬೇಕು ಎಂದು ಮನವಿ ಮಾಡಿದರು.
ಲೆಕ್ಕಾಧಿಕಾರಿ ಉಷಾ ಮಾತನಾಡಿ, 2024-25ನೇ ಸಾಲಿನಲ್ಲಿ ಕುಡಿಯುವ ನೀರಿನ ಶುಲ್ಕದಿಂದ 62.03 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿತ್ತು. ಡಿಸೆಂಬರ್‌ವರೆಗೆ 12.30 ಲಕ್ಷ ವಸೂಲಾಗಿದೆ. ಅಂಗಡಿಮಳಿಗೆಗಳ ಬಾಡಿಗೆಯಿಂದ 1.53 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿತ್ತು. ಕಳೆದ ಫೆಬ್ರವರಿಗೆ 40.52 ಲಕ್ಷ ವಸೂಲಾಗಿದೆ. ವ್ಯಾಪಾರ ಪರವಾನಗಿ ಶುಲ್ಕದಿಂದ 2.55 ಲಕ್ಷ ರೂ. ಆದಾಯ ಬಂದಿದೆ ಎಂದು ಮಾಹಿತಿ ನೀಡಿದರು.
ಪಪಂ ಈ ಹಿಂದಿನ ಆಡಳಿತ ಮಂಡಳಿ ಪಟ್ಟಣದ ಕೆಲವು ಬಡಾವಣೆ ನಿವಾಸಿಗಳಿಗೆ ಕುಡಿಯುವ ನೀರಿನ ಶುಲ್ಕ ಇಲ್ಲ ಎಂದು ತಪ್ಪು ಮಾಹಿತಿ ನೀಡಿ, ನಲ್ಲಿ ಸಂಪರ್ಕ ನೀಡಿದ್ದಾರೆ. ವಾಸ್ತವವಾಗಿ ಠೇವಣಿ ಹಣ ಪಾವತಿಸುವಂತಿಲ್ಲ. ಆದರೆ ಪ್ರತಿ ತಿಂಗಳೂ ಶುಲ್ಕ ಪಾವತಿಸಬೇಕಾಗಿದೆ. ಈ ತಪ್ಪನ್ನು ಸಾಧ್ಯವಾದಷ್ಟು ಬೇಗ ಸರಿಪಡಿಸಿದರೆ ಕುಡಿಯುವ ನೀರಿನ ಶುಲ್ಕ ವಸೂಲಾತಿ ಹೆಚ್ಚಾಗಲಿದೆ ಎಂದು ಸದಸ್ಯರು ಸಲಹೆ ನೀಡಿದರು. ಪಪಂ ಖಾಲಿ ಮಳಿಗೆಗಳ ಹರಾಜಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅಧ್ಯಕ್ಷೆ ಸುರಯ್ಯಬಾನು, ಆರ್.ಕುಮಾರಸ್ವಾಮಿ, ಶೋಜಾ, ಸೈಯದ್‌ವಸೀಂ, ಮುಕುಂದ, ಮುನಾವರಪಾಷ, ಸುಬ್ರಹ್ಮಣ್ಯ, ಅಣ್ಣಪ್ಪ, ಪಪಂ ಸಿಬ್ಬಂದಿ ಲಕ್ಷ್ಮಣ ಗೌಡ ಇದ್ದರು.