ಸರ್ಕಾರಿ ಶಾಲೆ ಉಳಿಸುವ ಜವಾಬ್ದಾರಿ ಶಿಕ್ಷರದ್ದು:ತಂಗಡಗಿ

0509-Kpl-Ravi-1
ಕೊಪ್ಪಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಸಚಿವ ಶಿವರಾಜ ತಂಗಡಗಿ ಉದ್ಘಾಟಿಸಿದರು. ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ್, ವಿಪ ಸದಸ್ಯೆ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಇದ್ದರು.
Published on

ಕೊಪ್ಪಳ: ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಉಳಿಸುವ ಜವಾಬ್ದಾರಿ ಸರ್ಕಾರ ಹಾಗೂ ಶಿಕ್ಷಕರ ಮೇಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.


ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಕಲ್ಯಾಣ ನಿಧಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.


ನಾನು ಹೆಚ್ಚು ಗೌರವಿಸುವುದು ಶಿಕ್ಷಕ ಹಾಗೂ ವೈದ್ಯರನ್ನು. ಒಬ್ಬರು ಜೀವನ ರೂಪಿಸಿದರೆ, ಮತ್ತೊಬ್ಬರು ಜೀವ ಉಳಿಸುವಂಥವರು. ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ಒಬ್ಬ ವ್ಯಕ್ತಿ ಏನೆಲ್ಲ ಆಗಬಹುದು. ಯಾವುದೇ ಹುದ್ದೆ ಅಲಂಕರಿಸಿದರೂ ಆತನ ಯಶಸ್ಸಿನ ಹಿಂದೆ ಒಬ್ಬ ಗುರು ಇರುತ್ತಾನೆ. ನಾನು ಒಬ್ಬ ಶಿಕ್ಷಕನ ಶಿಷ್ಯನೆಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಶಿಕ್ಷಕರ ಸಮಸ್ಯೆಗಳಿವೆ. ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಗುರು ಭವನ ನಿರ್ಮಾಣಕ್ಕೆ ಅನುದಾನ ಒದಿಗಿಸಲಾಗುವುದು. ಬಜೆಟ್‌ನಲ್ಲಿ ಸಿಂಹಪಾಲು ಶಿಕ್ಷಣ ಇಲಾಖೆಗಿದೆ. ಹೀಗಾಗಿ ನಿಮ್ಮ ಜವಾಬ್ದಾರಿ ಹೆಚ್ಚಿದೆ ಎಂದರು.


ದೇಶದ ಸವೋತ್ತಮ ಶಿಕ್ಷಕ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವಾಗಿ ಆಚರಿಸಲಾಗುತ್ತಿದೆ. ಅವರೊಬ್ಬ ಶ್ರೇಷ್ಠ ಶಿಕ್ಷಕ, ರಾಜಕಾರಣಿ. ಅವರಂತೆ ಎಲ್ಲ ಶಿಕ್ಷಕರು ಮಾದರಿಯಾಗಬೇಕು. ಕಾರಟಗಿ ತಾಲೂಕಿನ ಸೋಮನಾಳದ ಶಿಕ್ಷಕ ರಾಘವೇಂದ್ರ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆ ಅಂದಗೊಳಿಸಿದ್ದಾರೆ. ಗ್ರಂಥಾಲಯ ಮಾಡಿದ್ದಾರೆ. ವಿಷಯ ತಿಳಿದು ನಾನೇ ತೆರಳಿ ವೀಕ್ಷಿಸಿರುವೆ. ಅಂಥವರ ಸಂಖ್ಯೆ ಹೆಚ್ಚಬೇಕು. ಸರ್ಕಾರದ ಜತೆಗೆ ಶಿಕ್ಷಕರೂ ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.


ಸಂಸದ ಸಂಗಣ್ಣ ಕರಡಿ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಒಂದು ರಾಷ್ಟ್ರ ಮುಂದುವರೆಯಬೇಕಾದರೆ, ಶಿಕ್ಷಣ ಮತ್ತು ಮೂಲ ಸೌಕರ್ಯಗಳು ಅಭಿವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ನಮ್ಮ ದೇಶ ಮುನ್ನುಗ್ಗುತ್ತಿದೆ. ನಮ್ಮ ದೇಶದಲ್ಲಿ ಗುರುವಿಗೆ ಬಹುಮುಖ್ಯ ಸ್ಥಾನವಿದೆ. ಅದನ್ನು ಶಿಕ್ಷಕರು ಅರಿಯಬೇಕು. ಶಾಲಾ ಮಕ್ಕಳನ್ನು ತಮ್ಮ ಮಕ್ಕಳೆಂದು ಭಾವಿಸಿ ವಿದ್ಯೆ ಕಲಿಸಬೇಕು. ಶಿಕ್ಷಕರ ಕೊರತೆ ಇದ್ದು, ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಜತೆಗೆ ಶಿಕ್ಷಕರ ನೇಮಕಾತಿಯೂ ಆಗಬೇಕು. ಗುರು ಭವನ ನಿರ್ಮಾಣಕ್ಕೆ ಅಗತ್ಯ ನೆರವು ನೀಡಲಾಗುವುದು. ಸರ್ಕಾರವೂ ಅನುದಾನ ಒದಗಿಸಲಿ ಎಂದರು.


ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ. ಕೊಪ್ಪಳ ಜಿಲ್ಲೆ ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಂಬರ್ 1 ಸ್ಥಾನ ಪಡೆಯಬೇಕು. ಉತ್ತಮ ರ‌್ಯಾಂಕ್ ಗಳಿಸಿದ ಜಿಲ್ಲೆಯ ನುರಿತ ಶಿಕ್ಷಕರನ್ನು ಕರೆಸಿ ನಮ್ಮ ಶಿಕ್ಷಕರಿಗೆ ತರಬೇತಿ ಕೊಡಿಸಿ. ಸರ್ಕಾರದಿಂದ ಶಾಲೆಗಳ ಅಭಿವೃದ್ಧಿಗೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.


ವಿಪ ಸದಸ್ಯೆ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ ಮಾತನಾಡಿದರು. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಶಿಕ್ಷಕರ ಬೇಡಿಕೆಗಳನ್ನು ಮಂಡಿಸಿದರು. ಪದಾಧಿಕಾರಿಗಳಾದ ಮಂಜುನಾಥ ಬಿ. ಸೇರಿ ಇತರರು ಮನವಿ ಸಲ್ಲಿಸಿದರು.

ಡಿಸಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ, ಪಿಯು ಕಾಲೇಜು ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಅನಿಲಕುಮಾರ ಜಿ., ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರಗೌಡ, ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಬಾಬುಸಾಬ ಲೈನದಾರ, ಬೋಧಕೇತರ ಸಂಘದ ಜಿಲ್ಲಾಧ್ಯಕ್ಷ ಪದ್ಮನಾಭ ರಾವ್, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೊಟ್ರಪ್ಪ ಗಡಗಿ, ಬಸವರಾಜ ಕೋಮಲಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net