ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಹಕಾರ

ಮೇಲುಕೋಟೆಯ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ಡಾ.ಪ್ರೀತಿ ಮಹದೇವ್ ಮಕ್ಕಳಿಗೆ ಶೂ ಮತ್ತು ಸಾಕ್ಸ್‌ಗಳನ್ನು ಶನಿವಾರ ವಿತರಿಸಿದರು. ಶ್ರೀನಿವಾಸ್, ಸಂತಾನರಾಮನ್ ಇತರರರಿದ್ದರು.
2mlk2
Published on

ಮೇಲುಕೋಟೆ: ಕವಿ ಪು.ತಿ.ನ. ಹಾಗೂ ಸಂಪಾದಕ ಖಾದ್ರಿ ಶಾಮಣ್ಣ ಅವರು ವ್ಯಾಸಂಗ ಮಾಡಿದ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ ನೀಡಿದರು.


ಅವರು ಶನಿವಾರ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿ ಮಾತನಾಡಿ, ಶಾಲಾಭಿವೃದ್ಧಿಯ ಬಗ್ಗೆ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದ ಶಾಸಕರು ಶಾಲೆಯ ಶೌಚಗೃಹ ನಿರ್ಮಾಣ ಮತ್ತು ಆಟದ ಮೈದಾನದ ಕಾಮಗಾರಿಯನ್ನು ತಕ್ಷಣ ಮುಕ್ತಾಯಗೊಳಿಸಲು ಪಿಡಿಒಗೆ ಸೂಚಿಸುತ್ತೇನೆ. ಇಲಾಖಾ ಸೌಲಭ್ಯಗಳನ್ನು ಮಕ್ಕಳ ಉಪಯೋಗಕ್ಕೆ ನೀಡಲು ವಿಳಂಬ ಮಾಡಬಾರದು. ಶತಮಾನದ ಶಾಲೆಗೆ ಮಂಜೂರಾಗಿರುವ ಅಡುಗೆ ಮನೆ ಮತ್ತು ಊಟದ ಹಾಲ್ ನಿರ್ಮಾಣವನ್ನು ತಕ್ಷಣ ಆರಂಭಿಸಿ ಶೀಘ್ರ ಮುಕ್ತಾಯಗೊಳಿಸಲು ಸೂಚನೆ ನೀಡುತ್ತೇನೆ ಎಂದರು.


ಶಾಲೆಯ ಕಾಂಪೌಂಡ್ ಒಳಭಾಗದಲ್ಲಿರುವ ವಿಜಯನಗರ ಕಾಲದ ಸುಗ್ರೀವನ ಸನ್ನಿಧಿಯನ್ನೂ ಪರಿಶೀಲಿಸಿದ ಶಾಸಕರು ರಾಜ್ಯ ಪುರಾತತ್ವ ಇಲಾಖೆಯ ಮೂಲಕ ಜೀರ್ಣೋದ್ಧಾರ ಮಾಡಲು ಕ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು.


ಶಾಲಾ ಮಕ್ಕಳಿಗೆ ಇನ್ಫೋಸಿಸ್ ಸಾಂಖ್ಯಿಕ ವಿಭಾಗದ ವ್ಯವಸ್ಥಾಪಕಿ ಡಾ.ಪ್ರೀತಿ ಮಹದೇವ್ ಅವರಿಗೆ ಶಿಕ್ಷಣ ಇಲಾಖೆ ನೀಡಿರುವ ಶೂ ಮತ್ತು ಸಾಕ್ಸ್ ವಿತರಿಸಿದ ಶಾಸಕರು, ಮಕ್ಕಳು ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಸಂಯೋಜಕ ಶ್ರೀನಿವಾಸ್, ಮುಖ್ಯಶಿಕ್ಷಕ ಸಂತಾನರಾಮನ್, ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಈಶಮುರುಳಿ, ಕೆ.ಎನ್ ಸುಬ್ರಮಣ್ಯ, ದಿಲೀಪ್, ನಾಗೇಗೌಡ, ಚಂದ್ರಶೇಖರ್, ಗ್ರಾಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net