ಸರ್ಕಾರಿ ಶಾಲೆ ಅಭಿವೃದ್ಧಿ 33 ಲಕ್ಷ ರೂ. ನೆರವು; ಆಸ್ಟ್ರೇಲಿಯಾ ಮೂಲದ ಕಂಪನಿ ಕೊಡುಗೆ

SGR WEB
Published on

ಸಾಗರ: ಇಲ್ಲಿನ ವಿನೋಬನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಾಜೆಕ್ಟ್ ಕಲಾಂ ಎನ್ನುವ ಹೆಸರಿನಲ್ಲಿ ಆಂಟನ್ ಪಾರ್ ಎನ್ನುವ ಸಂಸ್ಥೆ 33 ಲಕ್ಷ ರೂ. ಕೊಡುಗೆಯಾಗಿ ನೀಡಿರುವುದು ಸ್ತುತ್ಯರ್ಹ ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಹೇಳಿದರು.

ಅಂಟೆನಾ ಪಾರ್ ಸಂಸ್ಥೆ ವಿನೋಬನಗರ ಶಾಲೆಗೆ 60 ಡೆಸ್ಕ್, ಟೇಬಲ್, ಸೋಲಾರ್ ದೀಪ, ರಂಗಮಂದಿರಕ್ಕೆ ಬಣ್ಣ ಮತ್ತು ಇತರ ರಿಪೇರಿ, ಶಾಲಾ ಕಟ್ಟಡ ದುರಸ್ತಿ, ಹತ್ತು ಶೌಚಗೃಹಳನ್ನು ನಿರ್ಮಿಸಿಕೊಟ್ಟು ಸಹಕರಿಸುತ್ತಿರುವುದು ಮಾದರಿಯಾಗಿದೆ. ಶಾಲೆಯ ಸುತ್ತಲೂ ಸುಸಜ್ಜಿತ ಚರಂಡಿ ವ್ಯವಸ್ಥೆ, ಉತ್ತಮವಾದ ಟಾರ್ ರಸ್ತೆ ನಿರ್ಮಾಣ ಸೇರಿದಂತೆ ನಗರಸಭೆಯಿಂದಲೂ 25 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಎಲ್ಲ ಸರ್ಕಾರಿ ಶಾಲೆಗಳಲ್ಲೂ ಶೌಚಗೃಹ ನಿರ್ಮಾಣ, ಬಣ್ಣ ಬಳಿಯುವುದರ ಬಗ್ಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ನಗರಸಭೆಯಿಂದ ಹೆಚ್ಚಿನ ಅನುದಾನ ನೀಡಿ ಸಹಕರಿಸುತ್ತಿದ್ದೇವೆ. ಫೆ.7ರಿಂದ ಮಾರಿಕಾಂಬಾ ಜಾತ್ರೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ನಗರಸಭೆ ಸದಸ್ಯ ಜನಾರ್ದನ ಉಡುಪ ಮಾತನಾಡಿ, ನಮ್ಮ ಭಾಗದ ನಿವಾಸಿಯಾದ ಪಲ್ಲವಿ ಅವರು ತಮ್ಮ ಪತಿ ಕೆಲಸ ಮಾಡುತ್ತಿರುವ ಕಂಪನಿಯಿಂದ ಕೊಡಮಾಡುವ ಸಹಕಾರವನ್ನು ಈ ಶಾಲೆಗೆ ಕೊಡಿಸಿದ್ದಾರೆ. ಬೇರೆ ಊರುಗಳಿಂದ ಪ್ರವಾಸಕ್ಕಾಗಿ ಬರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಲ್ಲೇ ಉಳಿದುಕೊಳ್ಳಲು ಅನುಕೂಲ ಸಹ ಮಾಡಿಕೊಡಲಾಗುವುದು ಎಂದರು.

ಬಿಇಒ ಕೆ.ಆರ್.ಬಿಂಬಾ ಮಾತನಾಡಿ,ಶಾಲೆಗಳ ಕೊಠಡಿ ರಿಪೇರಿ ಮತ್ತು ಮೂಲ ಸೌಕರ್ಯಗಳಿಗೆ ಶಿಕ್ಷಣ ಇಲಾಖೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸರ್ಕಾರಿ ಶಾಲೆಗೆ ಖಾಸಗಿ ಕಂಪನಿ ನೀಡಿರುವ ಈ ಕೊಡುಗೆ ಇತರರಿಗೂ ಪ್ರೇರಣಾದಾಯಕವಾಗಿದೆ. ವಿದೇಶಿ ಕಂಪನಿ ಬಿಹಾರ, ಕೇರಳ, ಹರ್ಯಾಣ ಹಾಗೂ ಕರ್ನಾಟಕಕ್ಕೆ ಈ ರೀತಿಯ ಸಹಕಾರ ನೀಡುತ್ತಿರುವುದು ಅತ್ಯಂತ ಉಪಯುಕ್ತವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net