ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

ಫೋಟೋ ಶೀರ್ಷಿಕೆ 18 ಸಿಆರ್_ಪಿ-2 ಎ
ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪಾಠಶಾಲೆಯ ಮಕ್ಕಳಿಗೆ ಶ್ರೀರಾಮ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಸಮವಸ್ತ್ರ ವಿತರಿಸಲಾಯಿತು. ಎನ್.ಆರ್.ಸುರೇಶ್, ಎನ್.ಆರ್.ವಾಸು, ಕಹಿಂಪಾಷಾ ಇತರರು ಇದ್ದರು.
Published on

ಚನ್ನರಾಯಪಟ್ಟಣ: ಸರ್ಕಾರಿ ಶಾಲೆಗಳು ಉಳಿಯದಿದ್ದರೆ ಬಡವರು, ಕೂಲಿ ಕಾರ್ಮಿಕರು ಹಾಗೂ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಶ್ರೀರಾಮ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಆರ್.ಸುರೇಶ್ ಅಭಿಪ್ರಾಯಪಟ್ಟರು.

ತಾಲೂಕಿನ ಶ್ರವಣಬೆಳಗೊಳ ಹೋಬಳಿ ನಾಗಯ್ಯನಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಸಂಘದ ವತಿಯಿಂದ ಉಚಿತವಾಗಿ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಕಡಿಮೆಯಾಗಿದೆ. ಹಲವು ಶಾಲೆಗಳು ಈಗಾಗಲೇ ಮುಚ್ಚಿವೆ. ಆದರೆ ಸರ್ಕಾರಿ ಶಾಲೆಗಳನ್ನು ನಂಬಿಕೊಂಡಿರುವ ಕುಟುಂಬಗಳಿಗೆ ಇದರಿಂದ ಬಹಳ ಸಮಸ್ಯೆಯಾಗಿದೆ. ಸರ್ಕಾರದೊಂದಿಗೆ ನಾಗರಿಕರು ಕೈಜೋಡಿಸಿ ಸರ್ಕಾರಿ ಶಾಲೆಗಳ ಉಳಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಎನ್.ಆರ್.ವಾಸು ಮಾತನಾಡಿ, ಸಮೀಪದಲ್ಲಿ ವಾಸವಿರುವ ಅಲೆಮಾರಿ ಸಮುದಾಯದ 10 ಕುಟುಂಬಗಳಿಗೆ ಇಲ್ಲಿನ ಸರ್ಕಾರಿ ಶಾಲೆ ವರದಾನವಾಗಿದೆ. ಇಲ್ಲದಿದ್ದರೆ ಸುಮಾರು 20ಕ್ಕೂ ಹೆಚ್ಚು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸುತ್ತಿದೆ. ಪಾಲಕರು ಖಾಸಗಿ ಶಾಲೆಗಳಿಗೆ ನೀಡುವ ಲಕ್ಷಾಂತರ ರೂ. ಶುಲ್ಕದ ಶೇ.5ರಷ್ಟು ಹಣವನ್ನು ಸರ್ಕಾರಿ ಶಾಲೆಗಳಿಗೆ ದೇಣಿಗೆ ನೀಡಿದರೆ ನೆರವಾಗಲಿದೆ. ಜತೆಗೆ ಗ್ರಾಮೀಣ ಭಾಗದ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಿದರು.

ಮುಖ್ಯ ಶಿಕ್ಷಕ ಕಹಿಂಪಾಷಾ, ಸಹ ಶಿಕ್ಷಕ ಡಿ.ಎಸ್.ಯೋಗೇಶ್, ಶ್ರೀರಾಮ ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ರಘುರಾಮ್, ಕಾರ್ಯದರ್ಶಿ ಎನ್.ವಿ.ಅಭಿಜಿತ್, ಖಜಾಂಚಿ ವೆಂಕಟೇಶ್, ಅಂಗನವಾಡಿ ಕಾರ್ಯಕರ್ತೆ ನಾಗರತ್ನಮ್ಮ, ಆಶಾ ಕಾರ್ಯಕರ್ತೆ ರಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net