

ಚಾಮರಾಜನಗರ: ಜಿಲ್ಲೆಯಲ್ಲಿ ಹಲವಾರು ದಾನಿಗಳ ಸಹಕಾರದಿಂದ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಹೇಳಿದರು.
ನಗರದ ಪಿಡಬ್ಲ್ಯೂಡಿ ಕಾಲೋನಿಯಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೇಸರ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ತಟ್ಟೆ, ಲೋಟ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಗೆ ಸಾಕಷ್ಟು ಕೊಡುಗೆಗಳನ್ನು ನೀಡಲು ಕಂಪನಿಗಳು ಬರುತ್ತಿವೆ. ಇನ್‌ಫೋಸಿಸ್ ಸಂಸ್ಥೆಯು ಸುಮಾರು 6 ರಿಂದ 7 ಕೋಟಿ ರೂ. ವರಗೆ ಶಾಲಾ ಪರಿಕರಿಗಳನ್ನು ಪ್ರೌಢಶಾಲಾ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ನೀಡಿದೆ. ಅದರ ಉಪಯೋಗವನ್ನು ಶಾಲಾ ಮಕ್ಕಳ ಪಡೆಯುತ್ತಿದ್ದಾರೆ. ಟಿವಿಎಸ್ ಕಂಪನಿ ಅನೇಕ ಶಾಲೆಗಳಿಗೆ ಕೊಡುಗೆ ನೀಡುತ್ತಿದ್ದು, ಬದನಗುಪ್ಪೆ ಶಾಲೆ, ಕೋಳಿಪಾಳ್ಯ ಶಾಲೆಯನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದರು.
ಪಿಡಬ್ಲ್ಯೂಡಿ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಣ ವ್ಯವಸ್ಥೆ ತರಬೇಕು ಎಂದು ಪಾಲಕರು ಒತ್ತಾಯಿಸಿದ್ದರು. ಇದರಿಂದ ಮಕ್ಕಳಿಗೆ ಅನುಕೂಲವಾಗುತ್ತದೆ. ಇದನ್ನು ಒಪ್ಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು. ಜಿಲ್ಲೆಯಲ್ಲಿ 56 ಸರ್ಕಾರಿ ಶಾಲೆಗಳು ಇಂಗ್ಲಿಷ್ ಶಾಲೆಗಳಾಗಿ ಪರಿವರ್ತನೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯನ್ನು ದತ್ತು ತೆಗೆದುಕೊಂಡಿರುವ ದಾನಿ ಡಾ.ಬಸವ ರಾಜೇಂದ್ರ, ನೇಸರ ಟ್ರಸ್ಟ್ ಅಧ್ಯಕ್ಷ ಜಿ.ಸಿ.ವೀರರಾಜೇ ಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಡಾ. ಶ್ವೇತಾ, ಸಿಆರ್‌ಪಿ ಎನ್.ಶಿವಕುಮಾರ್, ನೇಸರ ಟ್ರಸ್ಟ್ ಸದಸ್ಯ ಅನಿತಾ, ವಕೀಲ ನಿತಿನ್, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಶಂಕರ್ ಇತರರು ಹಾಜರಿದ್ದರು.