

ಹಾಸನ: ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಮತ್ತು ಬೋಧಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರ ಮಕ್ಕಳು ಸರ್ಕಾರಿ ಶಾಲಾ-ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಸರ್ಕಾರ ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸರ್ಕಾರಿ ಶಾಲಾ-ಕಾಲೇಜುಗಳನ್ನು ಖಾಸಗೀಕರಣ ಮಾಡಲಿ ಎಂದು ಕಿಡಿಕಾರಿದರು.
ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಿಲ್ಲೆಗೆ ಸರ್ಕಾರಿ ಕಾಲೇಜುಗಳನ್ನ ಮತ್ತು ಶಾಲೆಗಳನ್ನು ತರುವಲ್ಲಿ ಸಾಕಷ್ಟು ಶ್ರಮವಹಿಸಿದೆ. ಆದರೆ ಈಗ ಇರುವ ಸರ್ಕಾರ ಅವುಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ಮತ್ತು ಶಿಕ್ಷಕರನ್ನು ನೇಮಕ ಮಾಡಲು ಹಿಂದೇಟು ಹಾಕುತ್ತಿದೆ. ಕಳೆದ ಒಂದೂವರೆ ತಿಂಗಳಿನಿಂದ ವಿದ್ಯಾರ್ಥಿಗಳು ಉಪನ್ಯಾಸಕರಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣವೇ ಉನ್ನತ ಶಿಕ್ಷಣ ಸಚಿವರು ಇದರ ಕಡೆ ಗಮನಹರಿಸಿ ಉಪನ್ಯಾಸಕರನ್ನು ನೇಮಕ ಮಾಡಬೇಕು. ಅಥವಾ ಅತಿಥಿ ಉಪನ್ಯಾಸಕರನ್ನಾದರೂ ನೇಮಿಸಲಿ ಎಂದು ಆಗ್ರಹಿಸಿದರು.
ಗ್ಯಾರೆಂಟಿ ಯೋಜನೆಗಳಿಗೆ ಹಣ ಒದಗಿಸಲು ಆಗದೆ ಸರ್ಕಾರ ದಿವಾಳಿಯಾಗಿದೆ. ಆದ್ದರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಆದ್ದರಿಂದ ಎಲ್ಲ ಸರ್ಕಾರಿ ಶಾಲೆ ಕಾಲೇಜುಗಳನ್ನು ಖಾಸಗೀಕರಣ ಮಾಡಲಿ ಅಥವಾ ಖಾಸಗಿ ಒಡೆತನದವರಿಗೆ ವಿಲೀನ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿ ಜಿಲ್ಲೆ ಮತ್ತು ರಾಜ್ಯದಲ್ಲಿ ಉತ್ತಮ ಮಳೆಯಾಗಿರುವುದರಿಂದ ಸಾಕಷ್ಟು ಮನೆಗಳು ಬಿದ್ದು ಅನಾಹುತವಾಗಿದೆ. ಆದರೆ ಇಂದಿನ ಸರ್ಕಾರ ಮಳೆಯಿಂದ ಮನೆ ಬಿದ್ದು ಹೋದರೆ ಕೇವಲ 1,20,000 ರೂ. ಅನುದಾನ ನೀಡುತ್ತಿದೆ. ಈ ಹಣದಲ್ಲಿ ಮನೆ ಕಟ್ಟಲು ಸಾಧ್ಯವೇ? ನಮ್ಮ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ. ಅನುದಾನ ನೀಡುತ್ತಿದ್ದೇವು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತ ಯಾವ ರೀತಿ ಕೆಲಸ ನಿರ್ವಹಿಸುತ್ತಿದೆ, ಅಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಬಿಚ್ಚಿಡುತ್ತೇನೆ. ಹೊಳೆನರಸೀಪುರ ತಾಲೂಕಿಗೆ ಸರ್ಕಾರಿ ಕಾಲೇಜುಗಳ ಅಭಿವೃದ್ಧಿಗಾಗಿ 75 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಆದರೆ ಅದನ್ನು ಅರಸೀಕೆರೆಗೆ ವರ್ಗಾವಣೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.