ಸರ್ಕಾರಿ ವೈದ್ಯರು ಖಾಸಗಿಯವರೊಂದಿಗೆ ಶಾಮೀಲಾದರೆ ಕಠಿಣ ಕ್ರಮ; ಸಂಸದ ಶ್ರೇಯಸ್ ಪಟೇಲ್

06_HSN_01
Published on

ಹಾಸನ: ಸಂಸದ ಶ್ರೇಯಸ್ ಪಟೇಲ್ ಅವರ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ದಿಶಾ ಸಭೆಯು ಕೃಷಿ ಇಲಾಖೆಯ ಸಾಧನೆಗಳು ಮತ್ತು ರೈತರ ಸಮಸ್ಯೆಗಳ ಜತೆಗೆ ಸರ್ಕಾರಿ ಆಸ್ಪತ್ರೆಗಳ ಕಾರ್ಯವೈಖರಿಯ ಬಗ್ಗೆಯೂ ಗಂಭೀರ ಚರ್ಚೆಗೆ ವೇದಿಕೆಯಾಯಿತು. ಸಂಸದ ಶ್ರೇಯಸ್ ಪಟೇಲ್ ಅವರು ಬಡವರ ಪರವಾಗಿ ಧ್ವನಿಯೆತ್ತಿ, ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡುವ ಮೂಲಕ ಸಭೆಯ ಗಮನ ಸೆಳೆದರು.

ಜಿಲ್ಲೆಯಲ್ಲಿ ಮಳೆಯ ಪ್ರಮಾಣದ ಬಗ್ಗೆ ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು. ನಂತರ ರಸಗೊಬ್ಬರಗಳ ಲಭ್ಯತೆ ಮತ್ತು ಗುಣಮಟ್ಟದ ಬಗ್ಗೆ ಚರ್ಚೆ ನಡೆಯಿತು. ಖಾಸಗಿ ಅಂಗಡಿಗಳಲ್ಲಿನ ರಸಗೊಬ್ಬರಗಳ ಹಾವಳಿ ಹಾಗೂ ಗುಣಮಟ್ಟದ ಬಗ್ಗೆ ಸಂಸದರು ಕಳವಳ ವ್ಯಕ್ತಪಡಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ರೈತ ಭವನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ಸಭೆಯಲ್ಲಿ ಪಡೆಯಲಾಯಿತು.

ಇದೇ ವೇಳೆ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಕುರಿತು ಮಾತನಾಡಿದ ಶಾಸಕ ಶಿವಲಿಂಗೇಗೌಡ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬೆಳೆ ವಿಮೆ ಒಂದು ದೊಡ್ಡ ವಂಚನೆ ಎಂದು ನೇರವಾಗಿ ಆರೋಪಿಸಿದ ಅವರು, ಈ ಯೋಜನೆಯಲ್ಲಿ ವ್ಯಾಪಕ ಅವ್ಯವಹಾರ ನಡೆಯುತ್ತಿರುವ ಶಂಕೆ ಇದೆ. ಈ ಗಂಭೀರ ವಿಷಯವನ್ನು ಸಂಸದರು ಮುಂಬರುವ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಅವರು ಮನವಿ ಮಾಡಿದರು.

ಸಭೆಯಲ್ಲಿ ಶಾಸಕ ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿ, 2024-25ನೇ ಸಾಲಿನ ಕೃಷಿ ಇಲಾಖೆಯ ಪ್ರಮುಖ ಯೋಜನೆಗಳ ಪ್ರಗತಿಯನ್ನು ಅಧಿಕಾರಿಗಳು ವಿವರಿಸಿದರು. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಕೃಷಿ ಮೂಲಸೌಕರ್ಯ ನಿಧಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ಪರಂಪರಾಗತ ಕೃಷಿ ವಿಕಾಸ ಯೋಜನೆಯ ಅನುಷ್ಠಾನದ ಬಗ್ಗೆ ಸಭೆಗೆ ಮಾಹಿತಿ ನೀಡಲಾಯಿತು. ಎಲ್ಲ ಯೋಜನೆಗಳೂ ನಿಗದಿತ ಗುರಿಯಂತೆ ಉತ್ತಮ ಪ್ರಗತಿ ಸಾಧಿಸಿವೆ ಎಂದು ಅಧಿಕಾರಿಗಳು ತಿಳಿಸಿದರು.

ಸರ್ಕಾರಿ ವೈದ್ಯರ ಕರ್ತವ್ಯ ಲೋಪದ ವಿಷಯವೂ ಸಭೆಯಲ್ಲಿ ಪ್ರಸ್ತಾಪವಾಯಿತು. ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳ ಜೊತೆ ಶಾಮೀಲಾಗಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ ಗಂಭೀರ ಆರೋಪ ಮಾಡಿದರು. ಜಿಲ್ಲಾ ಆರೋಗ್ಯ ಅಧಿಕಾರಿಗಳು ತಾಲೂಕು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಒತ್ತಾಯಿಸಿದರು. ನೀವು ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾರಣಕ್ಕೆ ಜನ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಸಾಲ ಮಾಡುವಂತಾಗಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರಿ ವೈದ್ಯರು 24 ಗಂಟೆಯೂ ಕರ್ತವ್ಯ ನಿರ್ವಹಿಸಬೇಕು. ಅದಕ್ಕಾಗಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲು ತಾವು ಸಿದ್ಧವಿದ್ದೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ದೊರೆಯದ ಕಾರಣ ಬಡವರು ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಶುಲ್ಕ ತೆರಲು ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಹಾಸನದಲ್ಲೂ ಇದೇ ರೀತಿಯ ವ್ಯವಸ್ಥೆ ಇದೆ ಎಂಬ ಆರೋಪ ಕೇಳಿಬಂದಿದೆ. ಹಿಮ್ಸ್ ವೈದ್ಯರು ಬೆಳಿಗ್ಗೆ ಬಂದು ಹಾಜರಾತಿ ಹಾಕಿ ಹೊರಗೆ ಹೋಗುತ್ತಿದ್ದಾರೆ ಎಂಬ ದೂರುಗಳಿವೆ. ಇದು ಮುಂದುವರಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಗೈರುಹಾಜರಾಗುವುದು ಅಥವಾ ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾಗುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಸ್ಪಷ್ಟಪಡಿಸಿದರು.

ಈ ವಿಷಯಕ್ಕೆ ಧ್ವನಿಗೂಡಿಸಿದ ಸಂಸದ ಶ್ರೇಯಸ್ ಪಟೇಲ್, ಬಡವರು ಹೆಚ್ಚಾಗಿ ಬರುವ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net