

ಮೈಸೂರು: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೆದ್ಯರು ಕರ್ತವ್ಯದ ಅವಧಿಯಲ್ಲಿ ಖಾಸಗಿ ವೈದ್ಯಕೀಯ ಪ್ರಾಕ್ಟಿಸ್‌ಗೆ ಕಡಿವಾಣ ಹಾಕಲಾಗುವುದು. ಅದಕ್ಕಾಗಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜಿಯೋ ಟ್ಯಾಗ್ ಪದ್ಧತಿಯನ್ನೂ ಜಾರಿಗೊಳಿಸಲಾಗುವುದು ಎಂದು ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ವೈದ್ಯರ ಪೈಕಿ ಶೇ.10ರಿಂದ 15ರಷ್ಟು ವೈದ್ಯರು ಕೆಲಸಕ್ಕೆ ತಡವಾಗಿ ಬರುವುದು, ಸರಿಯಾಗಿ ಕೆಲಸ ಮಾಡದೇ ಇರುವುದು ಮತ್ತು ಕರ್ತವ್ಯದ ಅವಧಿಯಲ್ಲಿ ಬೇರೆ ಆಸ್ಪತ್ರೆಯಲ್ಲಿ ಕೆಲಸ ಮಾಡುವುದು ಗಮನಕ್ಕೆ ಬಂದಿದೆ. ವೈದ್ಯರ ದಕ್ಷತೆ, ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಖಾಸಗಿ ವೈದ್ಯಕೀಯ ಸೇವೆ ಅಭ್ಯಾಸವನ್ನು ಕುರಿತು ಚಿಂತನೆ ಇದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಯೋಮೆಟ್ರಿಕ್ ಜಾರಿ ಮಾಡಿ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹಾಜರಾತಿ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ. ಇದನ್ನು ಆಧರಿಸಿ ವೇತನ ನೀಡಲಾಗುತ್ತದೆ. ಬಳಿಕವೂ ಕರ್ತವ್ಯಲೋಪ ಎಸಗುವ ವೈದ್ಯರ ವಿರುದ್ಧ ತಕ್ಷಣ ಕ್ರಮ ವಹಿಸಬೇಕೆಂದು ಸಂಬಂಧಪಟ್ಟವರಿಗೆ ಸೂಚನೆಯನ್ನೂ ನೀಡಲಾಗಿದೆ ಎಂದರು.
ವೈದ್ಯರ ಖಾಸಗಿ ಪ್ರಾಕ್ಟಿಸ್‌ಗೆ ವಿರೋಧವಿಲ್ಲ. ಆದರೆ, ಕರ್ತವ್ಯ ಅವಧಿಯಲ್ಲಿ ಮಾತ್ರ ಬೇಡ. ಕರ್ತವ್ಯ ಅವಧಿ ಮುಗಿಯುವ ಸಂಜೆ 4ರ ಬಳಿಕ ಇವರಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲೇ ಪ್ರಾಕ್ಟಿಸ್‌ಗೆ ಅವಕಾಶ ನೀಡುವ ಕುರಿತು ಆಲೋಚನೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕ್ಷಯರೋಗ ಮುಕ್ತ ಭಾರತಕ್ಕೆ ಸಂಕಲ್ಪ :
2030ರ ಹೊತ್ತಿಗೆ ಕ್ಷಯರೋಗ ಮುಕ್ತ ಭಾರತ ಮಾಡಲು ಕೇಂದ್ರ ಸರ್ಕಾರ ಸಂಕಲ್ಪ ಮಾಡಿದೆ. ರಾಜ್ಯ ಸರ್ಕಾರವು 2025ರೊಳಗೆ ಕ್ಷಯ ರೋಗಮುಕ್ತ ಕರ್ನಾಟಕ ಮಾಡಲು ಗುರಿ ಹಾಕಿಕೊಂಡಿದೆ. ರಾಜ್ಯದಲ್ಲಿ ಡಿಸೆಂಬರ್ ಒಳಗೆ 4.80 ಕೋಟಿ ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಲಾಗುವುದು. ಗ್ರಾಮಒನ್, ನಗರಪ್ರದೇಶದಲ್ಲಿ ಏಜೆನ್ಸಿ ವತಿಯಿಂದ ತ್ವರಿತಗತಿಯಲ್ಲಿ ಕಾರ್ಡನ್ನು ಅರ್ಹರಿಗೆ ನೀಡಲಾಗುವುದು.
ರಕ್ತಹೀನತೆ ಸಮಸ್ಯೆ ನಿವಾರಣೆ ಆಂದೋಲನ ಕೈಗೊಂಡಿದ್ದು, ಶಾಲೆಯಲ್ಲಿ ಶಿಬಿರ ನಡೆಸಿ ಉಚಿತವಾಗಿ ಚಿಕಿತ್ಸೆ ನೀಡಿ, ಔಷಧ ವಿತರಿಸಲಾಗುವುದು. ಕಡುಬಡವರು, ಕೊಳಗೇರಿ ನಿವಾಸಿಗಳಿಗೆ ಆರೋಗ್ಯ ಸೇವೆ ನೀಡಲು ರಾಜ್ಯಾದ್ಯಂತ 438 ‘ನಮ್ಮ ಕ್ಲಿನಿಕ್’ ತೆರೆಯಲಾಗುವುದು. ನವೆಂಬರ್ 8ರಿಂದ ಇವುಗಳು ಕಾರ್ಯಾರಂಭ ಮಾಡಲಿವೆ ಎಂದು ಮಾಹಿತಿ ನೀಡಿದರು.
138 ಮಹಿಳಾ ಸ್ವಾಸ್ಥೃ ಕೇಂದ್ರ ಸ್ಥಾಪನೆ
138 ಮಹಿಳಾ ಸ್ವಾಸ್ಥೃ ಕೇಂದ್ರಗಳನ್ನು ನಗರಪ್ರದೇಶದಲ್ಲಿ ಸ್ಥಾಪನೆ ಮಾಡಲಾಗುವುದು. ಮಹಿಳಾ ಆರೋಗ್ಯ ಸಮಸ್ಯೆಗಳಿಗೆ ಇಲ್ಲಿ ಚಿಕಿತ್ಸೆ ದೊರೆಯಲಿದ್ದು, ದಿನಕ್ಕೆ ಒಬ್ಬ ತಜ್ಞರು ಭೇಟಿ ನೀಡಿ ಆರೋಗ್ಯ ಸೇವೆ ನೀಡಲಿದ್ದಾರೆ. ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಯಲ್ಲಿದ್ದ ವೈದ್ಯರ ಕೊರತೆ ನೀಗಿಸಲಾಗಿದೆ. ಸದ್ಯಕ್ಕೆ ಶೇ.10ರಷ್ಟು ಅಭಾವ ಇದೆ. ಜತೆಗೆ, ತಜ್ಞ ವೈದ್ಯರ ಕೊರತೆ ಇದೆ. ಈ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಾಗುವುದು. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಆಪರೇಷನ್ ಥಿಯೇಟರ್ ವಿಭಾಗವಿದೆ. ಆದರೆ, ಒಟಿ ತಜ್ಞರಿಲ್ಲ. ಹೀಗಾಗಿ, ನೇಮಕಾತಿ ಮಾಡಿಕೊಳ್ಳಲಾಗುವುದು. ಶೇ.ನೂರಕ್ಕೆ ನೂರಷ್ಟು ಡಿ ದರ್ಜೆ ಹುದ್ದೆಗಳ ಭರ್ತಿಗೂ ಕ್ರಮ ವಹಿಸಲಾಗಿದೆ. ಹಣಕಾಸು ಇಲಾಖೆ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಶೈಕ್ಷಣಿಕ ವರ್ಷದಿಂದ ಟೆಕ್ನಿಷಿಯನ್ ಕೋರ್ಸ್
ಸಾರ್ವಜನಿಕರಿಗೆ ಹೆಚ್ಚಿನ ವೈದ್ಯಕೀಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಅರೆವೈದ್ಯಕೀಯ ಕೋರ್ಸ್‌ಗಳಾದ ಕ್ರಿಟಿಕಲ್ ಕೇರ್ ಹಾಗೂ ಡಯಾಲಿಸಿಸ್ ಟೆಕ್ನಿಷಿಯನ್ ಕೋರ್ಸ್ ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾರಂಭಿಸಲಾಗುವುದು. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಕುರಿತು ಚಿಂತನೆ ಇದೆ. ರಾಜ್ಯದಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆ ಹಾಗೂ ಅಂತಾರಾಷ್ಟ್ರೀಯ ಪ್ರಕಟಣೆಗಳಿಗೆ ಒತ್ತು ನೀಡಲಾಗುವುದು. ಆರೋಗ್ಯ ಇಲಾಖೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ದರದಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಡಯಾಲಿಸಿಸ್ ಸೇವೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾರಂಭಿಸಲಾಗುವುದು. ಅದಕ್ಕಾಗಿ ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವಂತೆ ಸಂಬಂಧಿಸಿದ ಕಾಲೇಜುಗಳ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದರು.
ಟೆಲಿ ಸಮಾಲೋಚನೆ ಪರಿಣಾಮಕಾರಿಯಾಗಿ ಜಾರಿ
ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಟೆಲಿ ಸಮಾಲೋಚನೆಯನ್ನು ಇನ್ನೂ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದರು.
ಸರ್ಕಾರಿ ವೈದ್ಯಕೀಯ ಕಾಲೇಜುಗಳ ನಿರ್ದೇಶಕರು ಕಾಲೇಜಿನ ಎಲ್ಲ ವಿಭಾಗದ ಮುಖ್ಯಸ್ಥರೊಂದಿಗೆ ಪ್ರತಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಲು ಸೂಚಿಸಲಾಗಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ನೀಡಲಾಗುತ್ತಿರುವ ವೈದ್ಯಕೀಯ ಮರುಪಾವತಿಯನ್ನು ಅಧಿಕವಾಗಿ ಬಳಸಿಕೊಂಡು ವೈದ್ಯಕೀಯ ಕಾಲೇಜುಗಳ ಸಂಪನ್ಮೂಲ ಹೆಚ್ಚಿಸಿ ಈ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಲು ಕ್ರಮ ವಹಿಸಲಾಗಿದೆ. ಜಿಲ್ಲಾ ಮಟ್ಟದ ಆರೋಗ್ಯ ಶಿಬಿರವನ್ನು ನಿಯಮಿತವಾಗಿ ಆಯೋಜಿಸಬೇಕೆಂದು ಸೂಚಿಸಲಾಗಿದೆ ಎಂದರು.
ಮೈಸೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ
ಮೈಸೂರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮ್ ಸೆಂಟರ್ ಮತ್ತು ಜಿಲ್ಲಾ ಆಸ್ಪತ್ರೆ ಶೀಘ್ರದಲ್ಲೇ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿವೆ. ಇದಕ್ಕೆ ಬೇಕಾಗಿರುವ ಅಗತ್ಯ ಸಿಬ್ಬಂದಿ, ವೈದ್ಯರು, ತಜ್ಞರು, ಉಪಕರಣಗಳು ಮತ್ತು ಮೂಲಸೌಕರ್ಯ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉಪಕರಣ ಖರೀದಿಗೆ ಈಗಾಗಲೇ ಆರ್ಥಿಕ ಇಲಾಖೆ ಅನುಮತಿ ನೀಡಿದೆ. 60 ದಿನಗಳಲ್ಲಿ ಇದು ಕಾರ್ಯ ಚಟುವಟಿಕೆ ಶುರು ಮಾಡಲಿದೆ. ಶತಮಾನೋತ್ಸವ ಕಂಡಿರುವ ಮೈಸೂರು ವೈದ್ಯಕೀಯ ಕಾಲೇಜು, ಕೆ.ಆರ್.ಆಸ್ಪತ್ರೆ ಕಟ್ಟಡ ನವೀಕರಣಕ್ಕೆ 89 ಕೋಟಿ ರೂ. ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿ ಇದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಮೈಸೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಮಾಡಲಾಗುವುದು. ಇದಕ್ಕೆ ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯುವ ನಿರೀಕ್ಷೆ ಇದೆ ಎಂದು ಹೇಳಿದರು.