

ಶಿರಸಿ: ಸರ್ಕಾರಿ ವೆಬ್ಸೈಟ್ನಲ್ಲಿ ಮಜಿರೆಯೊಂದರ ಹೆಸರೇ ಮಾಯವಾದ ಕಾರಣ ಅಲ್ಲಿನ ನಿವಾಸಿಗಳು ಅಗತ್ಯ ದಾಖಲೆಗಳ ಜತೆ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಪರದಾಡುವ ಸ್ಥಿತಿ ನಿರ್ವಣವಾಗಿದೆ.
ತಾಲೂಕಿನ ದೇವನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸೇರಿದಂತೆ ಶಾಲೆ, ಅಂಗನವಾಡಿ, ಹತ್ತಾರು ಅಂಗಡಿಗಳನ್ನು ಹೊಂದಿರುವ ಡಿಪೂಬೈಲ್ ಮಜಿರೆ ಈಗ ಸರ್ಕಾರಿ ಅಧಿಕೃತ ವೆಬ್ಸೈಟ್ನಲ್ಲಿ ಮಾಯವಾಗಿದೆ. ಒಂದು ವರ್ಷದಿಂದ ಈ ಸಮಸ್ಯೆಯಿದ್ದು, ನೂರಾರು ಜನರು ತಮ್ಮ ನೆಲೆಯನ್ನು ದಾಖಲಿಸಲಾಗದೆ ಹೈರಾಣಾಗಿದ್ದಾರೆ.
ಮಜಿರೆಯೇ ಮಾಯ: ಸುಮಾರು 35 ಕುಟುಂಬ ಹಾಗೂ 175 ಮತಗಳನ್ನು ಹೊಂದಿರುವ ಈ ಮಜಿರೆ ವರ್ಷದ ಹಿಂದೆ ಸರ್ಕಾರಿ ದಾಖಲೆಯಲ್ಲಿತ್ತು. ಆದರೆ, ಏಕಾಏಕಿ ವೆಬ್ಸೈಟ್ನಲ್ಲಿ ಮಜಿರೆಯ ಹೆಸರು ನಮೂದಿಸಿದಲ್ಲಿ ಯಾವುದೇ ಫಲಿತಾಂಶ ತೋರಿಸುತ್ತಿಲ್ಲ. ಸಮೀಪದ ಅಮ್ಮಿನಳ್ಳಿ ನೆಮ್ಮದಿ ಕೇಂದ್ರಕ್ಕೆ ತೆರಳಿ ವಾಸ್ತವ್ಯ ಪ್ರಮಾಣಪತ್ರಕ್ಕೆ ಅರ್ಜಿ ನೀಡಿದಾಗ ಡಿಪೂಬೈಲ್ ಮಜರೆ ಇಲ್ಲದಿರುವುದು ಸ್ಥಳೀಯರಿಗೆ ತಿಳಿದಿದೆ. ಇದರಿಂದ ಮಜಿರೆಯ ನಿವಾಸಿಗಳು ಕಂಗಾಲಾಗಿದ್ದಾರೆ. ಜಾತಿ ಆದಾಯ ಪ್ರಮಾಣಪತ್ರ, ಆದಾಯ, ವಂಶಾವಳಿ, ಆಧಾರ್ ಸೇರಿದಂತೆ ಆನ್ಲೈನ್ ಮುಖಾಂತರ ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ಪಡೆಯುವ ಸುಮಾರು 7 ಪ್ರಮಾಣಪತ್ರಗಳಿಗೆ ಮಜಿರೆ ಹೆಸರೇ ನಮೂದಾಗದ ಕಾರಣ ತೊಂದರೆ ಎದುರಾಗಿದೆ. ಒಂದೊಮ್ಮೆ ಪ್ರಮಾಣಪತ್ರ ದೊರೆತರೂ ವಿಳಾಸ ಸರಿಯಾಗಿ ನಮೂದಾಗದೇ ಕೇವಲ ಗ್ರಾಮ ಮಾತ್ರ ಸಿಗಲಿದ್ದು, ಸರ್ಕಾರದ ಯೋಜನೆಗಳನ್ನು ಪಡೆಯಲು ಸಮಸ್ಯೆಯಾಗುತ್ತಿದೆ.
ಯಾವ ಯೋಜನೆಗೂ ಅರ್ಹರಲ್ಲ: ದೇವನಹಳ್ಳಿ ಗ್ರಾಮದಲ್ಲಿ ಒಟ್ಟು 25 ಮಜರೆಗಳಿದ್ದು, ಅದರಲ್ಲಿ ಡಿಪೂಬೈಲ್ ಸಹ ಒಂದಾಗಿದೆ. ಆದರೆ, ಈಗ 24 ಮಜರೆಗಳು ಮಾತ್ರ ಉಲ್ಲೇಖವಾಗಿದ್ದು, ಸರ್ಕಾರಿ ವೆಬ್ಸೈಟ್ನಿಂದ ಡಿಪೂಬೈಲ್ ಮಾಯವಾಗಿದೆ. ಇದರಿಂದ ಈ ಮಜಿರೆಯ ನಿವಾಸಿಗಳು ಸರ್ಕಾರದ ಯಾವ ಯೋಜನೆಗಳಿಗೂ ಅರ್ಹರಲ್ಲ ಎನ್ನುವಂತಾಗಿದ್ದು, ಹೊಸದಾಗಿ ಯಾವ ದಾಖಲೆಗಳು ಬೇಕಿದ್ದರೂ ತೊಂದರೆಪಡುವಂತಾಗಿದೆ. ಅಲ್ಲದೆ, ಚುನಾವಣೆಗೆ ಸ್ಪರ್ಧಿಸಲು ವಾಸ್ತವ್ಯ ಪ್ರಮಾಣಪತ್ರದ ಅಗತ್ಯವಿದ್ದು, ಪ್ರತಿ ಹಂತದಲ್ಲಿಯೂ ಗ್ರಾಮಸ್ಥರಿಗೆ ಸಮಸ್ಯೆ ಎನ್ನುವಂತಾಗಿದೆ. ಅಧಿಕಾರಿಗಳು ಪಕ್ಕದ ಗ್ರಾಮದಲ್ಲಿನ ವಾಸ್ತವ್ಯ ಪ್ರಮಾಣಪತ್ರ ನೀಡುವುದಾಗಿ ಹೇಳುತ್ತಾರೆ. ಆದರೆ, ಆಯಾ ಗ್ರಾಮಸ್ಥರು ತಕರಾರು ಮಾಡಿದಲ್ಲಿ ಇಲ್ಲಿನ ನಿವಾಸಿಗಳಿಗೆ ಸಮಸ್ಯೆ ಆಗುತ್ತದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.
ಸಮಸ್ಯೆ ಕುರಿತು ಗ್ರಾಮಸ್ಥರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ಶೀಘ್ರದಲ್ಲಿ ಈ ಸಮಸ್ಯೆ ಬಗೆಹರಿಸಬೇಕಾಗಿದ್ದು, ಇಲ್ಲದೇ ಹೋದಲ್ಲಿ ಇದು ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಕಾರಣ ಡಿಪೂಬೈಲ್ ಮಜಿರೆ ವೆಬ್ಸೈಟ್ನಲ್ಲಿ ದಾಖಲಾಗುವಂತೆ ಮಾಡಿ, ಅಗತ್ಯ ದಾಖಲೆಗಳು ಶೀಘ್ರದಲ್ಲಿ ಸಿಗುವಂತೆ ಮಾಡಬೇಕು.| ನಾರಾಯಣ ಹೆಗಡೆ ಮಜಿರೆ ನಿವಾಸಿ
ತಾಂತ್ರಿಕ ದೋಷದಿಂದ ಈ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಸ್ಥಳೀಯರು ಈಗಾಗಲೇ ಮಾಹಿತಿ ನೀಡಿದ್ದಾರೆ. ಸಮಸ್ಯೆಯ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.| ಎಂ.ಆರ್. ಕುಲಕರ್ಣಿ- ತಹಸೀಲ್ದಾರ್, ಶಿರಸಿ
EndFragment