

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ರಾಜ್ಯಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ನಗರದಲ್ಲಿ ಹೊಸದಾಗಿ ಸರ್ಕಾರಿ ವಿಶೇಷ ದತ್ತು ಕೇಂದ್ರ ಸ್ಥಾಪನೆಯಾಗಿದೆ.
ಈ ಹಿಂದೆ ನಗರದ ಮುರುಘಾ ಮಠದಲ್ಲಿದ್ದ‘ಮಡಿಲು’ದತ್ತು ಕೇಂದ್ರ 2023 ಮಾರ್ಚ್ 1ರಿಂದ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿ ಲ್ಲೆಯಲ್ಲಿ ಪತ್ತೆಯಾದ ಶಿಶು/ಮಕ್ಕಳನ್ನು ದಾವಣಗೆರೆ ಮತ್ತಿತರ ದತ್ತು ಕೇಂದ್ರಗಳಿಗೆ ಕಳಿಸಲಾಗುತ್ತಿತ್ತು.
ನಗರದ ಬಾಲಕಿಯರ ಬಾಲ ಮಂದಿರದಲ್ಲಿ ತಾತ್ಕಾಲಿಕವಾಗಿ ಕಾರ್ಯಾರಂಭ ಮಾಡಿರುವ ಈ ಕೇಂದ್ರಕ್ಕೆ ಜಿಲ್ಲಾಡಳಿತದಿಂದ ಅಧಿಕೃತ ವಾಗಿ ಸದ್ಯದಲ್ಲೇ ಚಾಲನೆ ಸಿಗಲಿದೆ. ಜಿಲ್ಲಾಸ್ಪತ್ರೆಯ ಡಿಎಸ್ ಎಸ್.ಪಿ. ರವೀಂದ್ರ ಮತ್ತಿತರರು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
10 ಮಕ್ಕಳ ಸಾಮರ್ಥ್ಯದ ಈ ಕೇಂದ್ರಕ್ಕೆ ಕೋ ಆರ್ಡಿನೇಟರ್, ಸೋಷಿಯಲ್‌ವರ್ಕರ್, ನಾಲ್ವರು ಆಯಾಗಳು ಹಾಗೂ ಒಬ್ಬ ಕಾವಲುಗಾರ ಹುದ್ದೆಗಳನ್ನು ಸೃಜಿಸಲಾಗಿದೆ. ಇವರೊಂದಿಗೆ ಸರ್ಕಾರಿ ವೈದ್ಯ ಹಾಗೂ ನರ್ಸ್ ಒಬ್ಬರನ್ನು ನಿಯೋಜಿಸಲಾಗಿದೆ.
ಹೆಚ್ಚುವರಿ ದತ್ತು ಕೇಂದ್ರಗಳು
ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಾಲಯ ವ್ಯಾಪ್ತಿಯ ಮಿನಿಸ್ಟರ್ ಆಫ್ ಚೈಲ್ಡ್ ಪ್ರೊಟೆಕ್ಷನ್‌ನ ನೇರ ಉಸ್ತುವಾರಿಯಲ್ಲಿ ದತ್ತು ಕೇಂದ್ರಗಳು(ಸರ್ಕಾರಿ-ಖಾಸಗಿ/ಎನ್‌ಜಿಒ) ಕಾರ್ಯನಿರ್ವಹಿಸುತ್ತವೆ. ಕಳೆದ ಆಗಸ್ಟ್ ಅಂತ್ಯದೊಳಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ವಿಶೇಷ ದತ್ತು ಕೇಂದ್ರಗಳು ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕೆಂದು ಸುಪ್ರೀಂಕೋರ್ಟ್‌ನ ನಿರ್ದೇಶನವಿದೆ.
ದಾವಣಗೆರೆ, ಧಾರವಾಡ, ಕಲಬುರಗಿಗಳಲ್ಲಿ ಈಗಾಗಲೇ ಇರುವ ಒಂದೊಂದು ದತ್ತು ಕೇಂದ್ರಗಳೊಂದಿಗೆ, ಹೆಚ್ಚುವರಿಯಾಗಿ ತಲಾ ಒಂದೊಂದು ಕೇಂದ್ರಗಳು, ಖಾಸಗಿ ಸೆಂಟರ್‌ಗಳು ಸ್ಥಗಿತವಾಗಿದ್ದ ಚಿತ್ರದುರ್ಗ, ರಾಮನಗರದಲ್ಲೂ ಹೊಸದಾಗಿ ತಲಾ ಒಂದೊಂದು ಕೇಂ ದ್ರಗಳನ್ನು ರಾಜ್ಯಮಕ್ಕಳ ರಕ್ಷಣಾ ನಿರ್ದೇಶನಾಲಯ 2024 ರ ಆಗಸ್ಟ್ 30ರಂದು ಮಂಜೂರು ಮಾಡಿದೆ.
ದತ್ತು ಪಡೆಯಲು ಅವಕಾಶ
ಮಕ್ಕಳು ಇಲ್ಲದ ದಂಪತಿ/ಸಿಂಗಲ್ ಪೆರೇಂಟ್‌ಗೆ ದತ್ತು ಪಡೆಯಲು ಅವಕಾಶವಿದೆ. ದತ್ತು ಸ್ವೀಕರಿಸಲು ಬಯಸುವಂಥ ಪಾಲಕರು ಮೊದಲಿಗೆ www . cara.gov.in ವೆಬ್‌ಸೈಟ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಇ ದಕ್ಕಾಗಿ ದಂಪತಿ ಹಾಗೂ ಸಿಂಗಲ್ ಪೇರೆಂಟ್‌ಗಳಿಗೆ ನಿರ್ದೇಶನಾಲಯ ವಯೋಮಿತಿ ಮಾರ್ಗಸೂಚಿ ನಿಗದಿಪಡಿಸಿದೆ.
ಸಂಬಂಧಿಕರ ಮಕ್ಕಳನ್ನು ದತ್ತು ಪಡೆಯಲು ಕೂಡ ಪ್ರತ್ಯೇಕ ಮಾರ್ಗಸೂಚಿಗಳಿವೆ. ದೇಶದ ಯಾವುದೇ ದತ್ತು ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡರೂ, ನಿರ್ದಿಷ್ಟವಾಗಿ ಸೂಚಿಸಿದ್ದರೆ ಯಾವುದೇ ರಾಜ್ಯಗಳಿಂದ ಮಕ್ಕಳನ್ನು ದತ್ತು ಪಡೆಯಲು ಅವಕಾಶವಿದೆ.
---ಕೋಟ್---
ಬಾಲಭವನ ಆವರಣದಲ್ಲಿ ಹೊಸ ಕೇಂದ್ರ
ಚಿತ್ರದುರ್ಗ ಬಾಲಭವನ ಆವರಣದಲ್ಲಿ 150/150 ಅಡಿ ವಿಸ್ತೀರ್ಣದಲ್ಲಿ 6.20 ಕೋಟಿ ರೂ.ವೆಚ್ಚದೊಂದಿಗೆ ಬಾಲಕಿಯರ ಬಾಲ ಮಂದಿರ ನಿರ್ಮಾಣಕ್ಕೆ ಯೋಜಿಸಲಾಗಿದೆ. ಇದೇ ಕಟ್ಟಡದಲ್ಲಿ ದತ್ತು ಕೇಂದ್ರವೂ ಇರಲಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಎಸ್ಟಿಮೇಟ್ ಕಳಿಸಲಾಗಿದೆ.
ಸಿ. ಸವಿತಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ,
ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಚಿತ್ರದುರ್ಗ
----