

ಮಳವಳ್ಳಿ : ತಾಲೂಕಿನ ಚನ್ನಪಿಳ್ಳೇಕೊಪ್ಪಲು ಬಳಿ ಒತ್ತುವರಿಯಾಗಿದ್ದ ಸರ್ಕಾರಿ ರಸ್ತೆಯನ್ನು ತಾಲೂಕು ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ಬುಧವಾರ ತೆರವು ಮಾಡಿದರು.
ಮೈಸೂರು ಮುಖ್ಯರಸ್ತೆಯಿಂದ ಚನ್ನಪಿಳ್ಳೇಕೊಪ್ಪಲು ಗ್ರಾಮಕ್ಕೆ ಹಾಗೂ ಹತ್ತಾರು ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಹತ್ತಾರು ವರ್ಷಗಳಿಂದ ಸುತ್ತಲಿನ ಜಮೀನಿನ ಮಾಲೀಕರು ಇಲ್ಲಿನ ರಸ್ತೆಯನ್ನು ಆಕ್ರಮಿಸಿಕೊಂಡಿದ್ದರು. ಇದರಿಂದ ಒಳ ಭಾಗದಲ್ಲಿರುವ ಜಮೀನಿನ ರೈತರು ಬೆಳೆಗಳನ್ನು ಬೆಳೆದರೆ ಸಾಗಣೆ ಮಾಡಲಾಗದೆ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದರು. ಪೂರಕ ರಸ್ತೆಯಿಲ್ಲದ ಕಾರಣ ಇಲ್ಲಿನ ಒಳ ಭಾಗದಲ್ಲಿ ಜಮೀನು ಹೊಂದಿರುವ ಬಹಳಷ್ಟು ರೈತರು ಬೇಸತ್ತು ಕೃಷಿ ಮಾಡುವುದನ್ನೇ ನಿಲ್ಲಿಸಿದ್ದರು. ಆದರೆ ಲೋಕೇಶ್ ಎಂಬ ರೈತ ತಮ್ಮ ಪೂರ್ವಜರಿಂದ ಭಾಗಾಂಶವಾಗಿ ಬಂದಿದ್ದ ಮೂರು ಎಕರೆ ಭೂಮಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಜೀವನ ನಿರ್ವಹಣೆಗೆ ಕೃಷಿ ಮಾಡಲು ಮುಂದಾಗಿದ್ದರು. ಆ ಸಂದರ್ಭದಲ್ಲಿ ಮುಂಭಾಗದ ಜಮೀನಿನ ಮಾಲೀಕರು ಬೆಳೆದ ಬೆಳೆ ಸಾಗಿಸಲು ತೊಂದರೆ ನೀಡಿದ್ದು, ತಾಲೂಕು ಆಡಳಿತಕ್ಕೆ ರಸ್ತೆ ಬಿಡಿಸಿಕೊಡುವಂತೆ ಮನವಿ ಸಲ್ಲಿಸಿದ್ದರು.
ಆ ವೇಳೆ ಕಡತ ಪರಿಶೀಲನೆ ನಡೆಸಿದಾಗ ಈ ಮಾರ್ಗವಾಗಿ 33 ಅಡಿ ಸರ್ಕಾರಿ ರಸ್ತೆ ಇರುವುದಾಗಿ ದಾಖಲೆಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರೈತ ಲೋಕೇಶ್ ರಸ್ತೆ ತೆರವಿಗಾಗಿ ತನ್ನ ಸ್ವಂತ ಹಣ ವ್ಯಯಿಸಿ ಜೆಸಿಬಿ ಯಂತ್ರಗಳನ್ನು ಬಾಡಿಗೆಗೆ ಕರೆಸಿ ರಸ್ತೆ ಒತ್ತುವರಿ ತೆರವು ಪ್ರಯತ್ನ ನಡೆಸಿದ್ದರು. ಆದರೆ ಒತ್ತುವರಿ ಮಾಡಿಕೊಂಡಿದ್ದವರು ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ತಂದು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು. ಈ ಬೆಳವಣಿಗೆ ಬೇಸತ್ತು ಕುಟುಂಬ ಸಮೇತ ಊರನ್ನೇ ತ್ಯಜಿಸಿ ಮೈಸೂರಿನಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡು ಬದುಕು ಕಂಡುಕೊಂಡಿದ್ದರು. ಆದರೆ ತನ್ನ ಜಮೀನಿಗೆ ರಸ್ತೆ ಸಂಪರ್ಕವನ್ನು ಪಡೆಯಲೇಬೇಕೆಂಬ ಹಟದಿಂದ ಸರ್ಕಾರಿ ರಸ್ತೆಯನ್ನು ತೆರವು ಮಾಡಿಸಿಕೊಡಿ ಎಂದು ದಾಖಲೆ ಹಿಡಿದು ಲೋಕಾಯುಕ್ತ ಮತ್ತು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ ಪ್ರಯತ್ನ ಮುಂದುವರಿಸಿದ್ದರು. ಇದರ ಫಲವಾಗಿ ಬುಧವಾರ ತಹಸೀಲ್ದಾರ್ ಲೋಕೇಶ್ ಸಮ್ಮುಖದಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವು ಮಾಡಲಾಯಿತು.
ಕಾರ್ಯಾಚರಣೆ ವೇಳೆ ರಾಜಸ್ವ ನಿರೀಕ್ಷಕ ಲಿಂಗಸ್ವಾಮಿ, ಕೆ.ಬಿ.ಮಲ್ಲೇಶ್, ಎಎಸ್‌ಐ ಶ್ರೀಕಂಠಯ್ಯ, ಸರ್ವೇಯರ್ ಬೀರೇಶ್ ಸೇರಿದಂತೆ ಕಂದಾಯ ಇಲಾಖೆಯ ಹಲವು ಸಿಬ್ಬಂದಿ ಹಾಜರಿದ್ದರು.