ಸರ್ಕಾರಿ ಯೋಜನೆ ಲಾಭ ಮಕ್ಕಳಿಗೆ ತಲುಪಲಿ

PH 12
Published on

ಚಿತ್ತಾಪುರ: ಗ್ರಾಮೀಣ ಭಾಗದ ಬಡ ಮಕ್ಕಳಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಅವುಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯ ಪ್ರಾಮಾಣಿಕತೆಯಿಂದ ನಡೆಯಬೇಕಿದೆ ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಹೇಳಿದರು.

ಆದರ್ಶ ವಿದ್ಯಾಲಯದಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚೆಕ್ಕಿ ವಿತರಣೆ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆ ಮಕ್ಕಳು ಸಂಕುಚಿತ ಭಾವದಿಂದ ಹೊರಬರಬೇಕು. ಇತಿಹಾಸ ನೋಡಿದರೆ ಬಡತನ ಮತ್ತು ಸರ್ಕಾರಿ ಶಾಲೆಯಲ್ಲಿ ಓದಿದವರೇ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಭಯ ಬಿಟ್ಟು ಬಂದ ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ ಮಾತನಾಡಿ, ವಿದ್ಯಾರ್ಥಿಗಳ ದೇಹ ಮತ್ತು ಮನಸ್ಸು ಸಮತೋಲನದಲ್ಲಿ ಇರಬೇಕು. ಅಪೌಷ್ಟಿಕತೆ ಕಡಿಮೆ ಆಗಬಾರದು ಹಾಗೂ ಮಕ್ಕಳ ಬೆಳವಣಿಗೆ ದೃಷ್ಟಿಯಿಂದ ಸರ್ಕಾರ ಈ ಯೋಜನೆ ರೂಪಿಸಿದೆ. ವಾರದಲ್ಲಿ 2 ದಿನ ಮೊಟ್ಟೆ, ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕೆ ವಿತರಿಸಲಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ನಾಯ್ಕೋಡಿ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ನಾಲವಾರ, ಪ್ರಮುಖರಾದ ತಮ್ಮನ್ನಾ ಕೌಸರ್, ವಿನೋದ ಗೌಳಿ, ಮಲ್ಲಿಕಾರ್ಜುನ ಕಾಳಗಿ, ಜಗದೀಶ ಚವ್ಹಾಣ್, ಕಾಶೀನಾಥ ಗುತ್ತೇದಾರ್, ಶಿವರಾಜ, ಸಂತೋಷ, ಹಣಮಂತ, ಸಂಗಾರೆಡ್ಡಿ, ಸಂಗಮೇಶ ರೋಣದ ಇತರರಿದ್ದರು. ಶಿವಪುತ್ರ ಸ್ವಾಗತಿಸಿದರು. ಸಂತೋಷಕುಮಾರ ಶಿರನಾಳ ನಿರೂಪಣೆ ಮಾಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net