

ಬಾಗಲಕೋಟೆ: ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆ ಈಡೇರಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಬೇಕು. ಅದರಂತೆ ಬಾಗಲಕೋಟೆಗೆ ಘೋಷಣೆಯಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪ್ರಕ್ರಿಯೆ ಆರಂಭಿಸಬೇಕು ಎಂದು ಎಎಪಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ರಮೇಶ ಬದ್ನೂರ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕಲ್ ಕಾಲೇಜು ಸ್ಥಾಪನೆಗೆ ತಾಂತ್ರಿಕ ಅಡೆತಡೆ ಬಗ್ಗೆ ಚರ್ಚೆ ನಡೆಸಬೇಕು. ಈಗಾಗಲೇ ಮೆಡಿಕಲ್ ಕಾಲೇಜು ಸ್ಥಾಪನೆಗೆ ಜಾಗೆ ಗುರುತಿಸಲಾಗಿದ್ದು, ವೈದ್ಯಕೀಯ ಶಿಕ್ಷಣ ಸಚಿವರು, ಆರೋಗ್ಯ ಸಚಿವರ ನೇತೃತ್ವದಲ್ಲಿ ಬಾಗಲಕೋಟೆಯ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಚರ್ಚೆ ನಡೆಸಲು ವಿಶೇಷ ಸಭೆ ನಡೆಸಬೇಕು.
ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧೆಡೆ ಸ್ಥಾಪಿಸಿರುವ ಸರ್ಕಾರಿ ಮೆಡಿಕಲ್ ಕಾಲೇಜು ಗಳಿಗೆ ಸರ್ವ ಪಕ್ಷಗಳ ನಿಯೋಗ ಕರೆದೊಯ್ದು ಅಧ್ಯಯನ ನಡೆಸಬೇಕು. ಪರಿಪೂರ್ಣ ಪ್ರಮಾಣದ ಕೆಲಸ ಆರಂಭಿಸಬೇಕು. ಬಾಗಲಕೋಟೆಯ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲವನ್ನು ಸ್ಥಾಪನೆ ಮಾಡಲು ಎರಡು ತಿಂಗಳ ಒಳಗಾಗಿ ಅನುದಾನ ನೀಡದೇ ಹೋದಲ್ಲಿ ಜಿಲ್ಲಾದ್ಯಂತ ಎಎಪಿ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಬಾಗಲಕೋಟೆ ನಗರದ ಮಾರುಕಟ್ಟೆ ಸಂಪೂರ್ಣವಾಗಿ ಸ್ಥಳಾಂತ ಮಾಡಿ ಒಂದೇ ಸೂರಿನಡಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆ, ಆಸ್ಪತ್ರೆ, ಪಶು ಚಿಕಿತ್ಸಾಲಯಗಳಿಗೆ ಸೌಲಭ್ಯಗಳನ್ನು ಒಗಿಸಬೇಕು. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಏಜೆಂಟರ ಹಾವಳಿ ತಪ್ಪಬೇಕು. ಸಂತ್ರಸ್ತರಿಗೆ ಪ್ರಮಾಣಿಕ ಸೇವೆ ನೀಡಬೇಕು. ನವನಗರದ ಯುನಿಟ್-೨ ರಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆ ಪರಿಹರಿಸಿ, ಸಾರಿಗೆ, ವೈದ್ಯಕೀಯ ಸೇವೆ, ಉದ್ಯೋಗ ಸೃಷ್ಠಿಗೆ ಕೈಗಾರಿಕೆ ಸ್ಥಾಪಿಸಬೇಕು ಎಂದು ಹೇಳಿದರು.
ಎಎಪಿ ಜಿಲ್ಲಾಧ್ಯಕ್ಷ ಕೆ.ಎಂ.ಕಲಾದಗಿ, ಬಿ.ಎಸ್.ಭಜನ್ನವರ್, ವೀರಣ್ಣ ಕೋಮಾರ ಸೇರಿದಂತೆ ಇತರರು ಇದ್ದರು.