ಸರ್ಕಾರಿ ಭೂಮಿಯಲ್ಲಿ ಮಣ್ಣು ಲೂಟಿ

21-KGL-1,
Published on

ಕೊಳ್ಳೇಗಾಲ: ತಾಲೂಕಿನ ಜಕ್ಕಳಿ ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ ಭೂಮಿಯಲ್ಲಿ ಅಕ್ರಮವಾಗಿ ಬೆಳೆ ಬಾಳುವ ಗ್ರಾವೆಲ್ ಮಣ್ಣು ಲೂಟಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ಜಕ್ಕಳಿ ಗ್ರಾಮದ ವ್ಯಾಪ್ತಿಯಲ್ಲಿರುವ ಕುಣಗಳ್ಳಿ ಸರ್ವೇ ನಂ.788ರ ಗುಡ್ಡದಲ್ಲಿ ಕಳೆದ ಎರಡು ದಿನಗಳಿಂದ ಜೆಸಿಬಿ ಬಳಸಿಕೊಂಡು ಮಣ್ಣು ಎತ್ತುವಳಿ ಮಾಡಿ ಲಾರಿಯ ಮೂಲಕ ರಾಜಾರೋಷವಾಗಿ ಸಾಗಿಸಲಾಗಿದೆ.

ದಂಧೆ ನಡೆದಿರುವ ಸ್ಥಳದ ಕೂಗಳತೆ ದೂರದಲ್ಲೆ ಸರ್ಕಾರಿ ಜಮೀನಿನಲ್ಲಿ ಪಿಎಂ ಕುಸುಮ್ ಯೋಜನೆಯ ಸೋಲಾರ್ ಪ್ಲಾಂಟ್ ಕಾಮಗಾರಿ ನಡೆಯುತ್ತಿದೆ. ಎರಡ್ಮೂರು ಹಿಟಾಚಿಗಳು ಹಾಗೂ ಲಾರಿಗಳು ಗುಡ್ಡವನ್ನು ಸಮತಟ್ಟು ಮಾಡುವ ಕಾರ್ಯದಲ್ಲಿ ಕಳೆದ 15ಕ್ಕೂ ಹೆಚ್ಚು ದಿನಗಳಿಂದ ಕೆಲಸ ನಿರ್ವಹಿಸುತ್ತಿದೆ.

ಈ ಸೋಗಿನಲ್ಲೆ ಕಳೆದ ಎರಡ್ಮೂರು ದಿನಗಳಿಂದ ಯಾವುದೇ ಅನುಮತಿ ಪಡೆಯದೆ ಸರ್ಕಾರಿ ಭೂಮಿಯಲ್ಲಿ ಗ್ರಾವೆಲ್ ಮಣ್ಣು ಎತ್ತುವಳಿ ಸದ್ದಿಲ್ಲದೆ ನಡೆಯುತ್ತಿತ್ತು. ಈ ಹಗರಣದಲ್ಲಿ ಜಕ್ಕಳ್ಳಿಯ ಸ್ಥಳೀಯ ವ್ಯಕ್ತಿಯೊಬ್ಬನ ಕೈವಾಡವಿದೆ ಎನ್ನಲಾಗಿದೆ. ಇಲ್ಲಿಯವರೆಗೂ 30 ರಿಂದ 40 ಕ್ಕೂ ಹೆಚ್ಚು ಲಾರಿ ಮಣ್ಣನ್ನು ಸಾಗಿಸಲಾಗಿದೆ. ಒಂದು ಲೋಡ್ ಮಣ್ಣಿಗೆ 6 ರಿಂದ 8 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಶಾಸಕರು, ಅಧಿಕಾರಿ ಹೆಸರು ಬಳಿಸಿ ಲೂಟಿ: ಮಣ್ಣು ಲೂಟಿ ಮಾಡಿಸುತ್ತಿದ್ದವರು ಈ ದಂಧೆಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಮತ್ತು ತಹಸೀಲ್ದಾರ್ ಹೆಸರನ್ನು ದುರ್ಬಳಕ್ಕೆ ಮಾಡಿಕೊಂಡಿರುವ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದೆ.

ತಿಮ್ಮರಾಜೀಪುರ ಗ್ರಾ.ಪಂ ಉಪಾಧ್ಯಕ್ಷೆ ಸಹನಾ ಪ್ರಿಯ ಮತ್ತು ಗ್ರಾ.ಪಂ ಸದಸ್ಯೆ ಪಾಸ್ಕ ರೋಸ್ಲಿನ್ ಈ ಬಗ್ಗೆ ಪ್ರತಿಕ್ರಿಯಿಸಿ, ಅಕ್ರಮ ಮಣ್ಣು ಲೂಟಿ ವಿಚಾರ ಪಂಚಾಯಿತಿ ಗಮನಕ್ಕೆ ಬಂದಿಲ್ಲ. ರಾತ್ರಿ ಹಗಲೆನಂದೆ ಮಣ್ಣು ಸಾಗಿಸುತ್ತಿದ್ದನ್ನು ಪರಿಶೀಲಿಸಿದ್ದಕ್ಕೆ ಗ್ರಾವೆಲ್ ಮಣ್ಣು ಮಾರಾಟ ಆಗುತ್ತಿದೆ ಎಂದು ತಿಳಿಯಿತು. ಈ ಬಗ್ಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೂ ದೂರವಾಣಿ ಮೂಲಕ ಮಾಹಿತಿ ನೀಡಿದ್ದೇವೆ. ನಾನೇನು ಮಣ್ಣು ಎತ್ತುವಳಿ ಮಾಡಿ ಎಂದು ಹೇಳಿಲ್ಲ ಎಂದು ಶಾಸಕರು ನಮಗೆ ತಿಳಿಸಿದ್ದಾರೆ. ಶಾಸಕ ಹೆಸರು ದುರ್ಬಳಕೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net