

ತುಮಕೂರು ; ರಾಜ್ಯದಲ್ಲಿ 19.39 ಲಕ್ಷ ಎಕರೆ ಜಮೀನನ್ನು ಖಾಸಗಿ ಸಂಘ, ಸಂಸ್ಥೆ, ಧಾರ್ಮಿಕ ಕೇಂದ್ರ ಟ್ರಸ್ಟ್ ಹಾಗೂ ಬೃಹತ್ ಉದ್ಯಮಿಗಳಿಗೆ ಗುತ್ತಿಗೆ ನೀಡಲು ಸರ್ಕಾರ ಮುಂದಾಗಿದೆ ಎಂದು ದೂರಿ ವಿವಿಧ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಸಿಪಿಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ರಾಜ್ಯಾದ್ಯಂತ ಈ ಹಿಂದೆಯೇ ಲಕ್ಷಾಂತರ ಜನ ಬಗರ್‌ಹುಕುಂ ಸಾಗುವಳಿದಾರರು ತಾವು ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಯ ಹಕ್ಕು ಪತ್ರ ಕೋರಿ ಅರ್ಜಿ ಸಲ್ಲಿಸಿದ್ದರೂ ಸಾಗುವಳಿ ಚೀಟಿ ನೀಡಿಲ್ಲ ಎಂದರು.
ಇಂತಹ ಬಗರ್ ಹುಕುಂ ಸಾಗುವಳಿ ಭೂಮಿಯನ್ನು ಸರ್ಕಾರಿ ಭೂಮಿ ಎಂದು ಪರಿಗಣಿಸಿ ಖಾಸಗಿ ಸಂಸ್ಥೆಗಳಿಗೆ ಮಂಜೂರು ಮಾಡಿದ್ದಲ್ಲಿ ಲಕ್ಷಾಂತರ ಕುಟುಂಬಗಳು ಭೂ ರಹಿತವಾಗಿ ಬೀದಿಪಾಲಾಗಲಿದ್ದಾರೆ, ಇದು ಸಾಮಾಜಿಕ ಸಂಘರ್ಷಕ್ಕೂ ಕಾರಣವಾಗಲಿದೆ ಎಂದರು.
ರಾಜ್ಯ ಸರ್ಕಾರ ನಿವೇಶನರಹಿತ ಸಮಿಕ್ಷೆ ನಡೆಸಿದ್ದು, ಅದರಂತೆ ಲಕ್ಷಾಂತರ ಕುಟುಂಬಗಳು ಸ್ವಂತ ವಾಸದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅವರಿಗೆಲ್ಲಾ ಇದುವರೆಗೂ ನಿವೇಶನ ಸಿಕ್ಕಿಲ್ಲ ಎಂದರು.
ಸಿಪಿಐ ಮುಖಂಡ ಕಂಬೇಗೌಡ ಮಾತನಾಡಿ, ರಾಜ್ಯದಲ್ಲಿ ಸರ್ಕಾರದ ಭೂಸ್ವಾಧೀನ ಕ್ರಮದಿಂದ ಭೂಮಿ ಕಳೆದುಕೊಂಡ ಭೂಸಂತ್ರಸ್ಥರಿಗೆ ಬದಲಿ ಭೂಮಿ ನೀಡುವ ನೂರಾರು ಪುನರ್‌ವಸತಿ ಯೋಜನೆಗಳ ಪ್ರಕ್ರಿಯೆ ಪೂರ್ಣಗೊಳ್ಳದೆ ಭೂ ಲಭ್ಯತೆಯ ಅನುಮೋದನೆ ರಾಜ್ಯ ಸರ್ಕಾರವನ್ನು ಎದುರು ನೋಡುತ್ತಿವೆ. ಈ ಹಂತದಲ್ಲಿ ಖಾಸಗಿ ಸಂಘ ಸಂಸ್ಥೆಗಳಿಗೆ ಭೂಮಿ ನೀಡಲ ಉದ್ದೇಶಿಸಿರುವುದು ಅಕ್ರಮ ಆಧ್ಯತೆ ನೀಡಿದಂತಾಗುತ್ತದೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ಪರವಾಗಿ ತುಮಕೂರು ತಹಸೀಲ್ದಾರ್ ಮೋಹನಕುಮಾರ್ ಸಿಪಿಐ ಕಾರ್ಯಕರ್ತರ ಮನವಿ ಸ್ವೀಕರಿಸಿದರು. ಈ ವೇಳೆ ಸಿಪಿಐ ಸಂಘಟನೆ ಮುಖಂಡರಾದ, ಕಾಂತರಾಜು, ರಮೇಶ್, ರಾಮಸ್ವಾಮಿ, ದೊಡ್ಡತಿಮ್ಮಯ್ಯ, ರವಿಕುಮಾರ್, ಉದಯ್, ವೆಂಕಟೇಶ್, ಜಾಫರ್ ಶರೀಫ್, ವೆಂಕಟೇಶ್ ಕುಪ್ಪೂರು, ರಾಜಶೇಖರ್, ನರಸೇಗೌಡ, ಮತ್ತಿತರರು ಇದ್ದರು.