ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತ

0704Klb12
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸಾರಿಗೆ ನೌಕರರು ಬುಧವಾರದಿಂದ ಅನಿರ್ಧಿಷ್ಟ ಮುಷ್ಕರ ಆರಂಭಿಸಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸಾರಿಗೆ ನೌಕರರ ಹೋರಾಟದ ಬಿಸಿ ಸರ್ಕಾರ ಮತ್ತು ಜನರಿಗೆ ತಟ್ಟಿದ್ದು, ಪ್ರಯಾಣಿಸಲು ಪರದಾಡುವಂತಾಗಿದೆ. ಕೆಲ ಖಾಸಗಿ ವಾಹನಗಳ ವ್ಯವಸ್ಥೆ ಮಾಡಿದ್ದರೂ ಎಲ್ಲ ಪ್ರಯಾಣಿಕರಿಗೆ ಇದು ಅನುಕೂಲವಾಗಲಿಲ್ಲ.
ಮುಷ್ಕರದ ಹಿನ್ನಲೆಯಲ್ಲಿ ಬುಧವಾರ ಡಿಪೋಗಳಿಂದ ಬಸ್ಗಳು ಹೊರ ಬರಲಿಲ್ಲ. ಇನ್ನೊಂದೆಡೆ ನೌಕರರು ಡಿಪೋದ ಕಡೆಗೆ ಸುಳಿಯಲಿಲ್ಲ. ಇನ್ನೂ ಹೊರ ಡಿಪೋಗಳಿಂದ ಬಂದಿದ್ದ ಬಸ್ಗಳನ್ನು ಡಿಪೋದಲ್ಲಿ ನಿಲ್ಲಿಸಲು ಬಿಡದ ಅಧಿಕಾರಿಗಳು ಒತ್ತಡ ಹೇರಿ ಬಸ್ ಓಡಿಸಲು ಪ್ರಯತ್ನಿಸಿದರು. ಇಲ್ಲಿ ಹಾಲ್ಟ್ ಮಾಡಲು ಬಿಡಲ್ಲ, ಅಲ್ಲದೆ ನಿಮ್ಮ ರೂಟ್ಗಳಿಗೆ ಹೋಗಿ ಎಂದು ತಾಕೀತು ಮಾಡಿದರು. ಒತ್ತಡಕ್ಕೆ ಮಣಿದ ಸಿಬ್ಬಂದಿ ನಾವು ಹೋಗು ಅಂದರೆ ಹೋಗುತ್ತೇವೆ, ಮುಂದೆ ಎಲ್ಲಿಯಾದರೂ ನಿಲ್ಲಿಸಿದರೆ ನಾವು ಜವಾಬ್ದಾರಿಯಲ್ಲ ಎಂದು ಹೇಳಿದರು. ಹೀಗಾಗಿ ಅಧಿಕಾರಿಗಳು ಸಹ ನಿಸ್ಸಹಾಯಕರಾದರು.
ನಗರದ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಬರುತ್ತಲೇ ಇದ್ದರು. ಹೀಗಾಗಿ ಅಧಿಕಾರಿಗಳು ಬಸ್ ಓಡಿಸಲು ಕೆಲವು ಸಿಬ್ಬಂದಿ ಮೇಲೆ ಒತ್ತಡ ಹೇರಿದರು. ಹೊರ ವಿಭಾಗದ ಬಸ್ಗಳನ್ನು ಓಡಿಸಲು ನಡೆಸಿದ ಪ್ರಯತ್ನ ಫಲಪ್ರದವಾಗಲಿಲ್ಲ. ನಿಲ್ದಾಣಕ್ಕೆ ಬಂದ ಜನರು ಅನಿವಾ
ರ್ಯವಾಗಿ ಖಾಸಗಿ ಬಸ್, ಜೀಪ್, ಮ್ಯಾಕ್ಸಿಕ್ಯಾಬ್ಗಳನ್ನು ಹತ್ತಿಕೊಂಡು ಹೋದರು.
ಈಶಾನ್ಯ ಸಾರಿಗೆ ಸಂಸ್ಥೆಯ ಎಲ್ಲ ಬಸ್ ಡಿಪೋಗಳು, ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ, ಸಾರಿಗೆ ಅಧಿಕಾರಿಗಳ ಕಚೇರಿಗಳ 500 ಮೀಟರ್ ಸುತ್ತಲಿನಲ್ಲಿ ಎಲ್ಲಿಯೂ ಪ್ರತಿಭಟನೆ ನಡೆಸುವಂತಿಲ್ಲ ಎಂದು ಸಂಸ್ಥೆಯ ಅಧಿಕಾರಿಗಳು ನ್ಯಾಯಾಲಯಕ್ಕೆ ಹೋಗಿ ಪ್ರತಿಬಂಧಕಾಜ್ಞೆ ತೆಗೆದುಕೊಂಡು ಬಂದಿದ್ದರಿಂದ ನೌಕರರು ಬಸ್ ನಿಲ್ದಾಣದ ಬಳಿ ಸುಳಿಯಲೇ ಇಲ್ಲ. ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸುವವರೆಗೂ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಮುಷ್ಕರ ನಿರತ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net