

ಹಾಸನ: ಆಜಾದಿಕಾ ಅಮೃತ ಮಹೋತ್ಸವದ ಪ್ರಯಕ್ತ ನಗರದ ಹೊರವಲಯದ ಶ್ರೀರಾಮನಗರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಭಾರತ ಆಹಾರ ನಿಗಮ(ಎಫ್ ಸಿಐ) ಗೋದಾಮಿಗೆ ಶನಿವಾರ ಭೇಟಿ ನೀಡಿ ಗೋದಾಮಿನಲ್ಲಿ ಅಕ್ಕಿ, ಇತರ ಧಾನ್ಯಗಳ ಸಂಗ್ರಹ ಮತ್ತು ಅವುಗಳ ವಿತರಣೆ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.
ಗೋದಾಮಿನ ವಿವಿಧ ವಿಭಾಗಗಳನ್ನು ವೀಕ್ಷಣೆ ಮಾಡಿದ ಮಕ್ಕಳಿಗೆ, ಕೇಂದ್ರ ಸರ್ಕಾರವು ದವಸ ಧಾನ್ಯಗಳನ್ನು ಇಲ್ಲಿ ಸಂಗ್ರಹಿಸುತ್ತದೆ. ಇದನ್ನು ರಾಜ್ಯ ಸರ್ಕಾರದ ಪಡಿತರ ವ್ಯವಸ್ಥೆಯಡಿ ವಿತರಣೆಗೆ ಹಾಗೂ ವಿವಿಧ ಯೋಜನೆಗಳಾದ ಅಂತ್ಯೋದಯ, ಹಾಸ್ಟೇಲ್ ಮುಂತಾದೆಡೆ ವಿತರಣೆಗೆ ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಎಫ್ ಸಿಐ ಗುಣಮಟ್ಟ ನಿಯಂತ್ರಣ ವ್ಯವಸ್ಥಾಪಕ ರಘುನಂದನ್ ಮಾತನಾಡಿ, ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾವು ಭಾರತ ಸರ್ಕಾರದಿಂದ ಸ್ಥಾಪಿಸಲಾದ ಅತಿದೊಡ್ಡ ನಿಗಮಗಳಲ್ಲಿ ಒಂದಾಗಿದೆ. 1964 ರ ಆಹಾರ ನಿಗಮಗಳ ಕಾಯಿದೆಯು 1965 ರಲ್ಲಿ ಎಫ್ ಸಿಐ ಅನ್ನು ಶಾಸನಬದ್ಧ ಸಂಸ್ಥೆಯಾಗಿ ಸ್ಥಾಪಿಸಲಾಯಿತು ಎಂದು ಹೇಳಿದರು.
ಇದು ತೀವ್ರ ಧಾನ್ಯದ ಕೊರತೆ, ನಿರ್ದಿಷ್ಟವಾಗಿ ಗೋಧಿ ಮತ್ತು ಅಕ್ಕಿ ಕೊರತೆ ನೀಗಿಸುವ ಹಿನ್ನೆಲೆಯಲ್ಲಿ ಸ್ಥಾಪಿಸಲಾಯಿತು. ಆಹಾರ ಧಾನ್ಯಗಳು ಮತ್ತು ಇತರ ಆಹಾರ ಪದಾರ್ಥಗಳನ್ನು ಖರೀದಿಸುವುದು, ಸಂಗ್ರಹಿಸುವುದು, ಸ್ಥಳಾಂತರಿಸುವುದು/ಸಾರಿಗೆ, ವಿತರಣೆ ಮತ್ತು ಮಾರಾಟ ಮಾಡುವುದು ಇದರ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.
ಇತ್ತೀಚೆಗೆ ಎಫ್ ಸಿಐ ಪೂರೈಕೆ ಮಾಡುವ ಅಕ್ಕಿಯಲ್ಲಿ ಫೋರ್ಟಿಫೈಡ್ ರೈಸ್ ಸೇರಿಸಲಾಗಿದೆ.ಇದನ್ನೇ ಕೆಲವರು ಪ್ಲಾಸ್ಟಿಕ್ ಅಕ್ಕಿ ಎಂದು ತಿಳಿದು ಅಕ್ಕಿಯನ್ನು ಬಳಸಲು ನಿರಾಕರಿಸಿದ್ದರು. ಈ ಅಕ್ಕಿ ನೋಡಲು ಪ್ಲಾಸ್ಟಿಕ್ ಅಕ್ಕಿಯಂತೆ ಕಾಣುತ್ತದೆ. ಆದರೆ, ಇದು ಸಾರವಧಿರ್ತ ಅಕ್ಕಿಯಾಗಿದ್ದು ಅತ್ಯುತ್ತಮ ವಿಟಮಿನ್ ಹೊಂದಿದೆ. ಅಪೌಷ್ಟಿಕತೆ ದೂರ ಮಾಡುವುದರ ಜೊತೆಗೆ ಮಕ್ಕಳ ಬೆಳವಣಿಗೆಗೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ತಿಳಿಸಿದರು.
ಶ್ರೀರಾಮನಗರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸುಧಾಮಣಿ ಮಾತನಾಡಿ, ಭಾರತದಲ್ಲಿ ಸ್ವಾತಂತ್ರ್ಯ ಕ್ಕೂ ಮೊದಲು ಸಾಕಷ್ಟು ಆಹಾರ ಕೊರತೆ ಕಾಡುತ್ತಿತ್ತು.ಹೀಗಾಗಿ ಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಹಸಿರು ಕ್ರಾಂತಿಯ ನಂತರ ಭಾರತ ಆಹಾರ ನಿಗಮವನ್ನು ಸ್ಥಾಪಿಸಿ, ರೈತರಿಂದ ಆಹಾರ ಧಾನ್ಯ ಖರೀದಿ ಮಾಡಿ ಸಂಗ್ರಹಿಸಲು ಪ್ರಾರಂಭಿಸಲಾಯಿತು. ನಿಮಗದಲ್ಲಿ ಸಂಗ್ರಹಿಸಿದ ಆಹಾರ ಧಾನ್ಯವನ್ನು ಅತಿವೃಷ್ಟಿ, ಅನಾವೃಷ್ಟಿ ಹಾಗೂ ಯುದ್ಧದ ಸಂದರ್ಭಗಳಲ್ಲಿ ಬಳಕೆ ಮಾಡಲಾಗುತ್ತದೆ ಎಂದ ಅವರು, ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಕೆ ಮಾಡುವ ಅಕ್ಕಿ ಭಾರತ ಆಹಾರ ನಿಗಮದಿಂದಲೇ ಪೂರೈಕೆಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತ ಆಹಾರ ನಿಗಮದ ಹಾಸನ ಗೋದಾಮು ವ್ಯವಸ್ಥಾಪಕ ಸತ್ಯನಾರಾಯಣ, ಸಹಾಯಕ ವ್ಯವಸ್ಥಾಪಕ ಸೋನುಕುಮಾರ್, ಶ್ರೀರಾಮನಗರ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕಿಯರಾದ ಮಂಜುಳ, ತಿಲೋತ್ತಮೆ, ವಿದ್ಯಾರ್ಥಿಗಳು, ಉಗ್ರಾಣದ ಸಿಬ್ಬಂದಿ ಇದ್ದರು.