ಸರ್ಕಾರಿ ಪಿಯುಸಿ ಕಾಲೇಜು ಆರಂಭಕ್ಕೆ ಆಗ್ರಹ

Padayathre
Published on

ಚಿತ್ರದುರ್ಗ: ತಾಲೂಕಿನ ಭರಮಸಾಗರದಲ್ಲಿ ಸರ್ಕಾರಿ ಪಿಯುಸಿ ಕಾಲೇಜು ಮಂಜೂರಾತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತಸಂಘ ಹಸಿರುಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಇದಕ್ಕೂ ಮುನ್ನ 34 ಕಿ.ಮೀ ದೂರದ ಭರಮಸಾಗರದಿಂದ ಪಾದಯಾತ್ರೆ ಮೂಲಕ ನಗರ ಪ್ರವೇಶಿಸಿದರು. ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಜಿಲ್ಲೆಯ ಜನ ಸಂಕಷ್ಟದಲ್ಲಿದ್ದಾರೆ. ಅತಿ ಹೆಚ್ಚು ಬರದಿಂದಾಗಿ ರೈತರು ತತ್ತರಿಸಿದ್ದಾರೆ. ಬದುಕು ನಡೆಸುವುದು ಕೂಡ ಕಷ್ಟಕರವಾಗಿದೆ. ರಾಜ್ಯದ ಸಿಎಂ, ವಿಧಾನ ಪರಿಷತ್ ಸಭಾಪತಿ ಅವರಿಗೆ ಮೂರ‌್ನಾಲ್ಕು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಬಡ ಮಕ್ಕಳು ಕಾರ್ಮಿಕರಾಗುವುದನ್ನು ತಡೆಯಲು ಭರಮಸಾಗರದಲ್ಲಿ ಸರ್ಕಾರಿ ಪಿಯುಸಿ ಕಾಲೇಜು ತೆರೆಯಬೇಕು. ಚಿಕ್ಕಬೆನ್ನೂರು ಸರ್ಕಾರಿ ಗೋಮಾಳದಲ್ಲಿ ಬಡವರಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.

ಅರಣ್ಯ ಭೂಮಿ, ಸರ್ಕಾರಿ ಗೋಮಾಳ, ಹುಲ್ಲುಬನ್ನಿ, ಶೇಂದಿವನದಲ್ಲಿನ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ರಾಜ್ಯದಲ್ಲಿರುವ ಗ್ರಾಮೀಣ ಪ್ರದೇಶದ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಸೌಲಭ್ಯ ಒದಗಿಸಬೇಕು ಎಂದು ಕೋರಿದರು.

ಮುಖಂಡರಾದ ಪಿ.ಸೂರಪ್ಪ, ಕೂಡ್ಲಹಳ್ಳಿ ಗೌರಿ ರಾಜಕುಮಾರ್, ಅಜ್ಜಪ್ಪ, ಎನ್.ಬಿ.ಪಾಪಮ್ಮ, ಟಿ.ಶಾಂತಕುಮಾರಿ, ಎನ್.ಟಿ.ಶಿವಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net