ಸರ್ಕಾರಿ ಪಾಲಿಟೆಕ್ನಿಕ್ ಅನಾಥ ; ಗ್ರಾಪಂ ಮತಎಣಿಕೆ ನಂತರ ಅಧಿಕಾರಿಗಳಿಂದ ಪೀಠೋಪಕರಣ ಧ್ವಂಸ?

DSC_8951
Published on

ತುಮಕೂರು: ತುಮಕೂರು ತಾಲೂಕು ಗ್ರಾಪಂ ಚುನಾವಣೆ ಮತ ಎಣಿಕೆಗೆ ಬಳಸಿಕೊಂಡಿದ್ದ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಂಪೂರ್ಣ ಹಾಳಾಗಿದೆ. ಕಲಿಕೆಗೆ ಯೋಗ್ಯವಿಲ್ಲದಂತೆ ಹಾಳುಗೆಡವಿ ಸುಮ್ಮನಾಗಿರುವ ಜಿಲ್ಲಾಡಳಿತದ ಬೇಜವಾಬ್ದಾರಿಗೆ ಖಂಡನೆ ವ್ಯಕ್ತವಾಗಿದೆ.

ಕರೊನಾ ಆತಂಕದ ನಡುವೆ ಆರಂಭವಾದ ಕಾಲೇಜಿಗೆ ಪ್ರವೇಶಿಸಿರುವ ವಿದ್ಯಾರ್ಥಿಗಳಿಗೆ ಕಾಲೇಜು ಹಾಳು ಕಟ್ಟಡದಂತೆ ಭಾಸವಾಗತೊಡಗಿದೆ. ವಿದ್ಯಾರ್ಥಿಗಳು ವಿಧಾನ ಪರಿಷತ್ ಸದಸ್ಯ ಎಂ.ಚಿದಾನಂದಗೌಡ ಅವರನ್ನು ಸಂಪರ್ಕಿಸಿ ಅವ್ಯವಸ್ಥೆಯನ್ನು ಗಮನಕ್ಕೆ ತಂದಿದ್ದಾರೆ.

ಚಿದಾನಂದಗೌಡ ಖುದ್ದು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಕರೆ ಮಾಡಿ ಸಮಸ್ಯೆ ಸರಿಪಡಿಸಲು ಮಾಡಿಕೊಂಡ ಮನವಿಗೂ ಜಿಲ್ಲಾಡಳಿತ ಸೊಪ್ಪು ಹಾಕಿಲ್ಲ. ವಿದ್ಯಾರ್ಥಿಗಳ ಅಳಲು ಜಾಸ್ತಿಯಾದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಕಲಾಪದಲ್ಲಿ ವಿಷಯ ಪ್ರಸ್ತಾಪಿಸುವ ಉದ್ದೇಶದಿಂದ ಭಾನುವಾರ ಕಾಲೇಜಿಗೆ ಭೇಟಿ ನೀಡಿದ್ದ ಎಂಎಲ್‌ಸಿ ಎಂ.ಚಿದಾನಂದಗೌಡ, ಜಿಲ್ಲಾಡಳಿತದ ವಿರುದ್ಧ ಕೆಂಡಾಮಂಡಲರಾದರು.

ಚುನಾವಣೆ ಸಿಬ್ಬಂದಿ ಅನುಕೂಲಕ್ಕೆ ತಕ್ಕಂತೆ ವಿದ್ಯುತ್ ಸಂಪರ್ಕ, ಇಂಟರ್‌ನೆಟ್ ಸಂಪರ್ಕ ಪಡೆಯಲು ಇಡೀ ಕಾಲೇಜಿನ ವಿದ್ಯುತ್ ಸಂಪರ್ಕ ಜಾಲಕ್ಕೆ ಧಕ್ಕೆ ತಂದಿದ್ದಾರೆ. ಅಲ್ಲಲ್ಲಿ ವಿದ್ಯುತ್ ತಂತಿ ನೇತಾಡುತ್ತಿದ್ದು, ಯಾವ ಕ್ಷಣದಲ್ಲಾದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಅಲ್ಲದೆ ಮತಪೆಟ್ಟಿಗೆ ದಾಸ್ತಾನು ಇರಿಸಿದ್ದ ಕೊಠಡಿ ಕಿಟಿಕಿಗಳಿಗೆ ಅಳವಡಿಸಿದ್ದ ಪ್ಲೇವುಡ್ ಶೀಟ್ ಕೂಡ ತೆಗೆಯದೆ ಕೊಠಡಿಗಳಲ್ಲಿ ಕತ್ತಲೆ ತುಂಬಿದೆ. ಕೊಠಡಿಗಳಲ್ಲಿದ್ದ ಪಾಠೋಪಕರಣ ಮತ್ತು ಪೀಠೋಪಕರಣಗಳನ್ನು ಜೆಸಿಬಿ ಬಳಸಿ ಸ್ಥಳಾಂತರಿಸುವಾಗ ಡೆಸ್ಕ್, ಕುರ್ಚಿಗಳು ಮುರಿದಿವೆ. ಪ್ರಯೋಗಾಲಯ, ಡ್ರಾಯಿಂಗ್ ರೂಂ ಪರಿಕರಗಳು ಹಾಳಾಗಿವೆ.

ವಿದ್ಯಾರ್ಥಿಗಳ ದೂರಿನ ಹಿನ್ನೆಲೆಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ನೀಡಿದಾಗ ಹಾಳುಬಿದ್ದ ಕಟ್ಟಡದಂತೆ ಭಾಸವಾಯಿತು. ಚುನಾವಣೆಗೆ ಬಳಸಿಕೊಂಡ ನಂತರ ಅದನ್ನು ಸರಿಪಡಿಸುವ ಜವಾಬ್ದಾರಿಯಿಂದ ಜಿಲ್ಲಾಡಳಿತ ನುಣುಚಿಕೊಂಡಿದೆ. ಕಿಟಕಿಗೆ ಒಡೆದಿರುವ ಹಲಗೆ ಕೂಡ ತೆಗೆದಿಲ್ಲ, ವಿದ್ಯುತ್ ಸಂಪರ್ಕ ಕಡಿತವಾಗಿದೆ. 50 ಲಕ್ಷ ರೂ. ವ್ಯಯಿಸಿದರಷ್ಟೇ ಮೊದಲಿನ ಸ್ಥಿತಿಗೆ ಬರಬಹುದು, ಅರಾಜಕತೆಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಾಸನಸಭೆಯಲ್ಲಿ ಮಾತನಾಡುತ್ತೇನೆ.

ಎಂ.ಚಿದಾನಂದಗೌಡ ವಿಧಾನ ಪರಿಷತ್ ಸದಸ್ಯ

ಮತ ಎಣಿಕೆಗೆ ಜಿಪಿಟಿ ಹೆಸರುವಾಸಿ: ತುಮಕೂರು ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ನಡೆದಿರುವ ಬಹುತೇಕ ಚುನಾವಣೆಗಳ ಮತ ಎಣಿಕೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿಯೇ ನಡೆದಿದೆ. ಮತಪೆಟ್ಟಿಗೆ ಭದ್ರತೆಗೆ ಸೂಕ್ತ ಎಂಬ ಹಿನ್ನೆಲೆಯಲ್ಲಿ ಕಾಲೇಜನ್ನು ಸಂಪೂರ್ಣ ವಶಕ್ಕೆ ಪಡೆಯುವ ಜಿಲ್ಲಾಡಳಿತ ಮತಎಣಿಕೆ ನಂತರ ಅದನ್ನು ಸ್ವಚ್ಛಗೊಳಿಸಿರುವ ಇತಿಹಾಸವೇ ಇಲ್ಲ. ಹೀಗೆ ಪದೇಪದೆ ಅಧಿಕಾರಿಗಳ ದಾಳಿಗೆ ಸಿಕ್ಕಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ತನ್ನ ಅಂದ ಕಳೆದುಕೊಂಡಿದೆ. ಲಕ್ಷಾಂತರ ರೂ. ಖರ್ಚು ಮಾಡುವ ಚುನಾವಣೆಗೆ ಬಳಸಿಕೊಳ್ಳುವ ಕೊಠಡಿಗಳನ್ನು ಸರಿಪಡಿಸಿಲು ಬಳಸಿಕೊಳ್ಳುವ ಪೂರ್ವದಲ್ಲಿದ್ದ ಸ್ಥಿತಿಗೆ ಬಿಟ್ಟುಹೋಗಲು ಹಣ ಮೀಸಲಿಡಬೇಕು ಎಂದು ಆಗ್ರಹವಿದೆ. ಕೂಡಲೇ ಜಿಲ್ಲಾಡಳಿತ ವಿದ್ಯಾರ್ಥಿಗಳು ಕಲಿಯಲು ಅನುಕೂಲವಾಗುವಂತೆ ಲೋಪ ಸರಿಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net