

ಬೀದರ್: ಜಿಲ್ಲೆಯ ಸರ್ಕಾರಿ ನೌಕರರು ಕಡ್ಡಾಯವಾಗಿ ಬೈಕ್ ಓಡಿಸುವಾಗ ಹೆಲ್ಮೆಟ್ ಹಾಗೂ ನಾಲ್ಕು ಚಕ್ರ ವಾಹನದಲ್ಲಿ ಸೀಟ್ ಬೆಲ್ಟ್ ಧರಿಸಲು ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದೆ.
ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಕಚೇರಿಗೆ ಹಾಗೂ ಕಾರ್ಯದ ನಿಮಿತ್ತ ವಿವಿಧ ಹಳ್ಳಿಗಳಿಗೆ ಬೈಕ್ ಅಥವಾ ವಾಹನದಲ್ಲಿ ಹೋಗುವಾಗ ಹೆಲ್ಮೆಟ್, ಸಿಟ್ ಬೆಲ್ಟ್ ಧರಿಸಬೇಕು. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ಸೂಚಿಸಿದ್ದಾರೆ.
ಭಾರತ ರಸ್ತೆ ಅಪಘಾತದಲ್ಲಿ ಜಗತ್ತಿನಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಕರ್ನಾಟಕ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಬೀದರ್ ಜಿಲ್ಲಾದ್ಯಂತ 2022ರಲ್ಲಿ 332 ಜನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಜನವರಿಯಿಂದ ಜುಲೈವರೆಗೆ 197 ಜನ ಸಾವಿಗೀಡಾದರೆ, 2022ರಲ್ಲಿ 15 ಮತ್ತು ಪ್ರಸಕ್ತ ವರ್ಷ 11 ಸರ್ಕಾರದ ವಿವಿಧ ಇಲಾಖೆ ನೌಕರರು ಮೃತಪಟ್ಟಿದ್ದಾರೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಅಪಘಾತ ಸಂಭವಿಸಲು ಪ್ರಮುಖ ಕಾರಣ ಸಂಚಾರ ಮತ್ತು ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಮಾಡದಿರುವುದು. ಬೈಕ್ ಸವಾರರು ಹೆಲ್ಮೆಟ್ ಹಾಗೂ ನಾಲ್ಕು ಚಕ್ರ ವಾಹನ ಸವಾರರು ಸೀಟ್ ಬೆಲ್ಟ್ ಧರಿಸದೆ ಚಲಾಯಿಸಿದರೆ ಅಪಘಾತ ವೇಳೆ ಜೀವ ಹಾನಿ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾ ಪೊಲೀಸ್ ಜನರಲ್ಲಿ ಜಾಗೃತಿ ಮೂಡಿಸಲು ರಸ್ತೆ ಸುರಕ್ಷತಾ ಅಭಿಯಾನ ಹಮ್ಮಿಕೊಂಡಿದೆ ಎಂದು ಹೇಳಿದ್ದಾರೆ.