ಸರ್ಕಾರಿ ನೌಕರನ ಅಸ್ಮಿತೆ ಉಳಿವಿಗೆ ಹೋರಾಟ

15spt1
Published on

ಸೋಮವಾರಪೇಟೆ: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಒಪಿಎಸ್ ಸಂಕಲ್ಪ ಯಾತ್ರೆ ಮತ್ತು ಧ್ವಜ ಹಸ್ತಾಂತರ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಇಲ್ಲಿನ ಕಕ್ಕೆಹೊಳೆ ಜಂಕ್ಷನ್ ಬಳಿಯಿಂದ ದ್ವಿಚಕ್ರ ವಾಹನಗಳ ಮೂಲಕ ಪಟ್ಟಣದ ಮುಖ್ಯ ಬೀದಿಗಳಲ್ಲಿ ಜಾಥಾ ನಡೆಸಿ, ಎನ್‌ಪಿಎಸ್ ವಿರುದ್ಧ ಘೋಷಣೆ ಕೂಗಿದರು.


ಸಂಘದ ಅಧ್ಯಕ್ಷ ಶಾಂತಾರಾಮ್ ಮಾತನಾಡಿ, ನಿಶ್ಚಿತ ಪಿಂಚಣಿ ಎಂಬುದು ಕೇವಲ ಆರ್ಥಿಕ ಸೌಲಭ್ಯವಲ್ಲ. ಪ್ರಾಮಾಣಿಕ ಸರ್ಕಾರಿ ನೌಕರನ ಗೌರವದ ಪ್ರತೀಕ. ಕುಟುಂಬದ ಭದ್ರತೆಗಾಗಿ ಸರ್ಕಾರಿ ನೌಕರನ ಅಸ್ಮಿತೆಯ ಉಳಿವಿಗಾಗಿ ಹೋರಾಡಬೇಕು. ಡಿಸೆಂಬರ್ 19 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಮಾಡು ಇಲ್ಲವೇ ಮಡಿ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಎಲ್ಲ ಎನ್‌ಪಿಎಸ್ ನೌಕರರು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.


ಸಂಘದ ತಾಲೂಕು ಅಧ್ಯಕ್ಷ ಬಿ.ಎಂ.ಸತೀಶ್ ಮಾತನಾಡಿ, ಪಿಂಚಣಿ ಬೇಡಿಕೆ ನಮ್ಮ ಹಕ್ಕು. ಎನ್‌ಪಿಎಸ್ ಜಾರಿಯಾಗಿ 16 ವರ್ಷ ಕಳೆದರೂ ಇನ್ನೂ ಸಮಸ್ಯೆ ಇತ್ಯರ್ಥವಾಗಿಲ್ಲ. ಹೋರಾಟ ಅನಿವಾರ್ಯ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.


ಸಂಘದ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣನವರ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್, ತಾಲೂಕು ಅಧ್ಯಕ್ಷ ಧರ್ಮಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಕಂದಾಯ ಇಲಾಖೆಯ ಗೋಪಿನಾಥ್ ಮತ್ತಿತರರು ಇದ್ದರು. ಇದೇ ಸಂದರ್ಭ ಹೋರಾಟದ ಧ್ವಜವನ್ನು ಹಸ್ತಾಂತರಿಸಲಾಯಿತು.


ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಮತ್ತು ಪ್ರೌಢಶಾಲಾ ನೌಕರರ ಸಂಘ, ಕಂದಾಯ ಇಲಾಖೆ, ನ್ಯಾಯಾಂಗ ಇಲಾಖೆ, ಶಿಕ್ಷಣ ಇಲಾಖೆ ಲಿಪಿಕ ನೌಕರರ ಸಂಘ ಮತ್ತಿತರ ಸಂಘಗಳು ಬೆಂಬಲ ಸೂಚಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net