

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಸರ್ಕಾರಿ ನೌಕರ ಸಂಘದ ವತಿಯಿಂದ ನಿವೃತ್ತ ನೌಕರರಿಗೆ, ನೂತನವಾಗಿ ಸರ್ಕಾರಿ ಸೇವೆಗೆ ಸೇರಿದವರಿಗೆ ಹಾಗೂ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದವರಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿತ್ತು.
ಮಂಗಳವಾರ ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕಾನೂನು ಇಲಾಖೆಯ ಜಂಟಿ ನಿರ್ದೇಶಕ ರಮೇಶ್‌ಬಾಬು, ಗ್ರಾಮದ ನೌಕರರು ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವುದರಿಂದ ಗ್ರಾಮದ ಜನರಲ್ಲಿ ಸೌಹಾರ್ದತೆ ಮತ್ತು ಶಿಕ್ಷಣದ ಬಗ್ಗೆ ಒಲವು ಮೂಡಲು ಸಹಕಾರಿಯಾಗುತ್ತದೆ. ಮುಂದಿನ ಪೀಳಿಗೆಗೆ ಶಿಕ್ಷಣದ ಮತ್ತು ನೌಕರಿಯ ಮಹತ್ವವನ್ನು ತಿಳಿಸಬೇಕಾಗಿದೆ. ಕಟ್ಟೆಮಳಲವಾಡಿ ಗ್ರಾಮದಲ್ಲಿರುವ ನಮ್ಮ ಮಕ್ಕಳು ಹಣದ ಆಸೆಗಾಗಿ ಹೊಗೆಸೊಪ್ಪು ಹರಾಜು ಮಂಡಳಿಗೆ ಕೆಲಸಕ್ಕೆ ಹೋಗುತ್ತಿದ್ದು, ಅದನ್ನು ತಡೆದು ಶಾಲಾ-ಕಾಲೇಜುಗಳಿಗೆ ಅವರನ್ನು ಕಳುಹಿಸಬೇಕಾಗಿದೆ ಎಂದರು.
ಹಂಪಿ ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಸಚಿವ ಪ್ರೊ.ಪಾಂಡುರಂಗ ಬಾಬು ಮಾತನಾಡಿ, ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಒತ್ತು ನೀಡಿ ಮಕ್ಕಳಿಗೆ ಗ್ರಾಮದಲ್ಲಿ ಸುಸಜ್ಜಿತವಾದ ಒಂದು ಕೋಚಿಂಗ್ ಸೆಂಟರ್ ಸ್ಥಾಪಿಸಿ ಅವರನ್ನು ಆಧುನಿಕ ಶಿಕ್ಷಣ ಪದ್ಧತಿಯ ಬಗ್ಗೆ ವೃತ್ತಿ ಮಾರ್ಗದರ್ಶನ ಮಾಡುವ ಅವಶ್ಯಕತೆ ಇದೆ. ಇದನ್ನು ಇಲ್ಲಿನ ಸರ್ಕಾರಿ ನೌಕರರ ಜತೆಗೂಡಿ ಎಲ್ಲರೂ ಮಾಡಬೇಕಾಗಿದೆ. ಇದಲ್ಲದೆ ಬೌದ್ಧ ಸ್ತೂಪ ನಿರ್ಮಾಣ ಮಾಡಿ ಅದರಲ್ಲಿ ಧ್ಯಾನ, ಆಧ್ಯಾತ್ಮಿಕ ಮತ್ತು ಉತ್ತಮವಾದ ಗ್ರಂಥಾಲಯವನ್ನು ಸ್ಥಾಪಿಸಿ ಗ್ರಾಮದ ಯುವಕರಿಗೆ ಓದುವ ಹವ್ಯಾಸವನ್ನು ರೂಢಿ ಮಾಡಬೇಕಾಗಿದೆ ಎಂದರು.
ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಕ್ಕಳಿಗೆ ಸನ್ಮಾನ ಮಾಡಿ ನಾಗರಾಜ್ ಮಲ್ಲಾಡಿ ಮಾತನಾಡಿ, ಪ್ರತಿ ತಿಂಗಳು ನೌಕರರು ಸಭೆ ಸೇರಿ ಗ್ರಾಮದ ಕುಂದು ಕೊರತೆ ಹಾಗೂ ಅವಶ್ಯಕತೆಗಳನ್ನು ಚರ್ಚಿಸಿದರೆ ನಮ್ಮ ಗ್ರಾಮ ಮಾದರಿ ಗ್ರಾಮವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ವೀರಭದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ನಿಂಗರಾಜ್ ಮಲ್ಲಾಡಿ, ಉಪಪ್ರಾಂಶುಪಾಲ ಸಂತೋಷ್ ಕುಮಾರ್, ಉಪನ್ಯಾಸಕ ನಾಗೇಂದ್ರ, ಕೆ.ಎಂ.ರಾಜು, ಕೆ.ಪಿ.ಪ್ರಸನ್ನ, ರುದ್ರಕೃಷ್ಣ, ಸಂಪತ್, ಕೃಷ್ಣಯ್ಯ, ಆನಂದ್ ಯಜಮಾನರಾದ ಅಂಕಯ್ಯ, ವೈಕುಂಠಯ್ಯ, ಪುಟ್ಟರಾಜು, ಶ್ರೀನಿವಾಸ್, ಭಾಸ್ಕರ್, ಗ್ರಾಮ ಪಂಚಾಯತಿ ಸದಸ್ಯ ದಿಲೀಪ್, ವರಲಕ್ಷ್ಮೀ ಮತ್ತು ಗ್ರಾಮಸ್ಥರು ಹಾಜರಿದ್ದರು. ಸಿಂಗೇಶ್ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.