ಸರ್ಕಾರಿ ಗೌರವದೊಂದಿಗೆ ಯೋಧನಿಗೆ ಅಂತಿಮ ನಮನ

09-2
ಬಡಕುಂದ್ರಿ ಗ್ರಾಮದ ಯೋಧ ಶಿವಾನಂದ ಬಾಬು ಶಿರಗಾಂವಿ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ.
Published on

ಹುಕ್ಕೇರಿ, ಬೆಳಗಾವಿ: ಜಮ್ಮು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವಾಗಲೇ ಹೃದಯಾ ಘಾತದಿಂದ ಈಚೆಗೆ ನಿಧನರಾದ ತಾಲೂಕಿನ ಬಡಕುಂದ್ರಿ ಗ್ರಾಮದ ವೀರಯೋಧ ಶಿವಾನಂದ ಶಿರಗಾಂವಿ (42) ಅವರ ಅಂತ್ಯಕ್ರಿಯೆ ಯನ್ನು ಶನಿವಾರ ಸಕಲ ಸರ್ಕಾರಿ ಗೌರವದೊಂದಿಗೆ ಸ್ವಗ್ರಾಮದಲ್ಲಿ ನೆರವೇರಿಸಲಾಯಿತು.

ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸರ್ಕಾರದ ಪರವಾಗಿ ಹುಕ್ಕೇರಿ ತಾಲೂಕು ದಂಡಾಧಿಕಾರಿ ಡಾ. ಡಿ.ಎಚ್. ಹೂಗಾರ, ಮಾಜಿ ಸಚಿವ ಶಶಿಕಾಂತ ನಾಯಿಕ, ಬೆಳಗಾವಿ ಡಿ.ಎ.ಆರ್. ಪೊಲೀಸ್ ವರಿಷ್ಠಾಧಿಕಾರಿ ಕಾಶಪ್ಪನವರ, ಯಮಕನಮರಡಿ ಸರ್ಕಲ್ ಇನ್ಸಪೆಕ್ಟರ್ ರಮೇಶ ಛಾಯಾಗೋಳ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಗಣ್ಯರು ಹಾಗೂ ಜನಪ್ರತಿನಿಧಿಗಳು ಅಂತಿಮ ನಮನ ಸಲ್ಲಿಸಿದರು. ಶ್ರೀನಗರದ 55 ಆರ್.ಆರ್. ಬಟಾಲಿಯನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧ ಶಿವಾನಂದ ಶಿರಗಾಂವಿ ಕಳೆದ ವಾರ ಪತ್ನಿ ಜೊತೆ ದೂರವಾಣಿ ಮುಖಾಂತರ ಮಾತನಾಡಿ ಆದಷ್ಟು ಬೇಗ ಗುಣಮುಖನಾಗಿ ಗ್ರಾಮಕ್ಕೆ ಬರುವುದಾಗಿ ಹೇಳಿದ್ದರು ಎಂದು ಪತ್ನಿ ಕಣ್ಣೀರು ಹಾಕಿದರು. ಮೃತ ಯೋಧನ ತಾಯಿ, ಪತ್ನಿ, ಇಬ್ಬರು ಪುತ್ರರು ಪಾರ್ಥಿವ ಶರೀರದ ಮುಂದೆ ಕುಳಿತು ರೋದಿಸುತ್ತಿರುವ ದೃಶ್ಯ ಕಂಬನಿ ತರಿಸಿತು. ಯೋಧನ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದರು. ಗ್ರಾಮದಲ್ಲಿ ಸ್ವಯಂಘೋಷಿತವಾಗಿ ಅಂಗಡಿ ಮುಂಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net