

ಕೆರೂರ ಚಂಡಿಗಢದಲ್ಲಿ ಸೇನಾ ತರಬೇತಿ ವೇಳೆ ಹೃದಯಾಘಾತದಿಂದ ಮೃತಪಟ್ಟ ಯೋಧ ಉಪೇಂದ್ರ ಸೋಮನಾಥ ರಾಠೋಡ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವ-ಗ್ರಾಮ ಚಿಂಚಲಕಟ್ಟಿ ಎಲ್.ಟಿಯಲ್ಲಿ ಶುಕ್ರವಾರ ನೆರವೇರಿತು.
ಕಳೆದ ಮಾರ್ಚ್‌ನಲ್ಲಿ ಅಸ್ಸಾಂ ರೈಫಲ್ಸ್ ಸೇನೆಗೆ ಆಯ್ಕೆಯಾಗಿದ್ದ ಉಪೇಂದ್ರ, ಮೂರು ತಿಂಗಳಿಂದ ಚಂಡಿಗಢದಲ್ಲಿ ಸೇನಾ ತರಬೇತಿ ಪಡೆಯುತ್ತಿದ್ದರು. ತರಬೇತಿ ವೇಳೆಯೇ ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ.
ಯೋಧನ ಪಾರ್ಥಿವ ಶರೀರ ಚಂಡಿಗಢದಿಂದ ವಿಮಾನ ಮೂಲಕ ಶುಕ್ರವಾರ ಬೆಳಗ್ಗೆ ಬೆಳಗಾವಿಗೆ ತರಲಾಯಿತು. ಅಲ್ಲಿಂದ ರಸ್ತೆ ಮಾರ್ಗವಾಗಿ ಸೇನಾ ಆಂಬುಲೆನ್ಸ್‌ನಲ್ಲಿ ಕೆರೂರ ಪಟ್ಟಣಕ್ಕೆ ಬರಮಾಡಿಕೊಳ್ಳಲಾಯಿತು.
ಕೆರೂರ ಪಟ್ಟಣದಿಂದ 5 ಕಿಮೀ ದೂರವಿರುವ ಚಿಂಚಲಕಟ್ಟಿ ಎಲ್.ಟಿ ಗ್ರಾಮದವರೆಗೆ ಪಾರ್ಥಿವ ಶರೀರದ ಬೃಹತ್ ಮೆರವಣಿಗೆ ನಡೆಯಿತು. ದಾರಿಯಲ್ಲಿ ಮೆರವಣಿಗೆ ಉದ್ದಕ್ಕೂ ‘ಉಪೇಂದ್ರ ಅಮರ ರಹೇ, ಬೋಲೋ ಭಾರತ ಮಾತಾಕಿ ಜೈ’ ಎಂಬ ಘೋಷಣೆಗಳು ಮುಳುಗಿದವು.
ಮುಗಿಲು ಮುಟ್ಟಿದ ಆಕ್ರಂದನ : ಯೋಧನ ಪಾರ್ಥಿವ ಶರೀರ ಕಂಡು ತಾಯಿ ಶಾರದಾ, ಸಹೋದರಿ ಕಾವೇರಿ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಯೋಧನ ಅಗಲಿಕೆಗೆ ಗ್ರಾಮಸ್ಥರು ಕಂಬನಿ ಮಿಡಿದರು.
ಅಂತಿಮ ದರ್ಶನ : ಸ್ವ-ಗ್ರಾಮದ ಹೊರವಲಯದಲ್ಲಿ ಸಾರ್ವಜನಿಕರಿಗೆ ಯೋಧನ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿತ್ತು. ಅಂತಿಮ ಅಂತ್ಯಕ್ರಿಯೆಯಲ್ಲಿ ಪೊಲೀಸ್ ಕವಾಯತು ಹಾಗೂ ಮೂರು ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು.
ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ, ಶಾಸಕ ಭೀಮಸೇನ ಚಿಮ್ಮನಕಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಅವಳಿ ಜಿಲ್ಲೆಯ ಹಾಲು ಒಕ್ಕೂಟ ಅಧ್ಯಕ್ಷ ಈರಣ್ಣ ಕರಿಗೌಡರ, ಜಿಪಂ ಮಾಜಿ ಸದಸ್ಯ ಡಾ. ಎಂ.ಜಿ. ಕಿತ್ತಲಿ, ಕಾಂಗ್ರೆಸ್ ಮುಖಂಡ ಬಸವಪ್ರಭು ಸರನಾಡಗೌಡ ಯೋಧನ ಅಂತಿಮ ದರ್ಶನ ಪಡೆದರು.
ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಸೀಲ್ದಾರ್ ಮಧುರಾಜ ಕೆ., ಸಿಪಿಐ ಕರಿಯಪ್ಪ ಬನ್ನೆ, ಪಿಎಸ್ ಐ ಭೀಮಪ್ಪ ರಬಕವಿ, ಸಿದ್ದಪ್ಪ ಯಡಹಳ್ಳಿ, ವಿಠ್ಠಲ ನಾಯಕ, ಮಾಜಿ ಸೈನಿಕರಾದ ಸೋಮು ಪಮ್ಮಾರ, ಯಲ್ಲಪ್ಪ ಚೂರಿ, ಯಮನಪ್ಪ ಕ್ವಾರಿ, ಮಾದೇವ ಮುದಕವಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.