

ಅಥಣಿ ಗ್ರಾಮೀಣ, ಬೆಳಗಾವಿ: ವಿದ್ಯಾರ್ಥಿಗಳ ಅನುಕೂಲಕ್ಕೆ ಸರ್ಕಾರ ಪದವಿ ಪೂರ್ವ ಮಹಾವಿದ್ಯಾಲಯಗಳನ್ನು ನಿರ್ಮಾಣ ಮಾಡಿದೆ. ಆದರೆ, ಅಲ್ಲಿ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕುತ್ತಿಲ್ಲ.
ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ಅಥಣಿ ಪಟ್ಟಣ, ತಾಲೂಕಿನ ಕೊಕಟನೂರ, ನದಿ ಇಂಗಳಗಾವಿ, ಅಡಹಳ್ಳಿ ಹಾಗೂ ಕೊಟ್ಟಲಗಿಯಲ್ಲಿ ಒಟ್ಟು 5 ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಸ್ಥಾಪಿಸಿದೆ. ಆದರೆ, ಎಲ್ಲ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇರುವುದರಿಂದ ಮಹಾವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಕೊಟ್ಟಲಗಿ ಗ್ರಾಮದ ಪ.ಪೂ ಕಾಲೇಜುಗಳಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮೂರು ವಿಭಾಗಗಳಲ್ಲಿ ಒಟ್ಟು 179 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಇಲ್ಲಿ ಕಾಯಂ ಉಪನ್ಯಾಸಕರು ಇರದೆ ನಿಯೋಜನೆ (ಡೆಪ್ಯುಟೇಶನ್) ಮೇಲೆ ಉಪನ್ಯಾಸಕರು ಪಾಠ ಮಾಡುತ್ತಿದ್ದಾರೆ. ಮತ್ತೊಂದು ವಿಪರ್ಯಾಸವೆಂದರೆ ಬೇರೆ ಕಾಲೇಜಿನ ಪ್ರಾಚಾರ್ಯರು ಮತ್ತೊಂದು ಮಹಾವಿದ್ಯಾಲಯವನ್ನು ನಿರ್ವಹಣೆ ಮಾಡುತ್ತಿದ್ದಾರೆ.
ಕೊಕಟನೂರ ಪ.ಪೂ ಕಾಲೇಜಲ್ಲಿ ಒಟ್ಟು 448 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಇಲ್ಲಿ ಇತಿಹಾಸ, ಕನ್ನಡ, ಗಣಿತ, ರಾಜ್ಯಶಾಸ್ತ್ರ ಉಪನ್ಯಾಸಕರಿಲ್ಲ. ಅತಿಥಿ ಉಪನ್ಯಾಸಕರು ಸರಿಯಾಗಿ ಕಾಲೇಜಿಗೆ ಬರುತ್ತಿಲ್ಲ. ಇದರಿಂದ ಶಿಕ್ಷಣ ಕುಂಠಿತವಾಗುತ್ತಿದೆ. ಅಡಹಳ್ಳಿ ಕಾಲೇಜಿನಲ್ಲಿ ಇತಿಹಾಸ ಮತ್ತು ವ್ಯವಹಾರ ಅಧ್ಯಯನ ಭೋದಕರಿಲ್ಲ. ನದಿ ಇಂಗಳಗಾಂವ ಕಾಲೇಜಲ್ಲಿ ಕಲಾ ಮತ್ತು ವಿಜ್ಞಾನ ವಿಭಾಗಗಳಲ್ಲಿ 280 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಅಲ್ಲಿ ಇಂಗ್ಲಿಷ್ ಮತ್ತು ಇತಿಹಾಸ ಭೋದಕರಿಲ್ಲ.
ಅಥಣಿ ನಗರದಲ್ಲಿರುವ ಕಾಲೇಜಿನಲ್ಲಿ ಒಟ್ಟು 798 ವಿದ್ಯಾರ್ಥಿಗಳಿದ್ದು, ರಾಜ್ಯಶಾಸ್ತ್ರ ವಿಭಾಗದಲ್ಲಿ ಕಾಯಂ ಬೋಧಕರಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಹೆಚ್ಚುವರಿಯಾಗಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡಿ ಸರ್ಕಾರಿ ಕಾಲೇಜ್ ನಿರ್ಮಿಸುತ್ತದೆ. ಆದರೆ, ಶಿಕ್ಷಣ ನೀಡುವ ಉಪನ್ಯಾಸಕರನ್ನು ನೇಮಿಸುತ್ತಿಲ್ಲ. ಇದರಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಮರೆಯಾದಂತಾಗಿದೆ. ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪನ್ಯಾಸಕರ ಕೊರತೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಆಗ್ರಹಿಸುತ್ತಾರೆ.