

ಚಿತ್ರದುರ್ಗ: ರಾಜವೀರ ಮದಕರಿನಾಯಕ ಜಯಂತಿಯನ್ನು ಮುಂದಿನ ದಿನಗಳಲ್ಲಿ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಜಿಲ್ಲಾ ನಾಯಕ ಸಮಾಜ, ಸರ್ವ ಸಮುದಾಯಗಳಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ರಾಜ ವೀರ ಮದಕರಿನಾಯಕ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದುರ್ಗದಲ್ಲಿ ಮದಕರಿನಾಯಕ ಥೀಮ್ ಪಾರ್ಕ್ ನಿರ್ಮಿಸುವುದಾಗಿ ಕಳೆದ ಚುನಾವಣೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದರು. ಆದರೆ, ಅಧಿಕಾರ ಸಿಗಲಿಲ್ಲ. ಹೀಗಾಗಿ ಈಗಿನ ಕಾಂಗ್ರೆಸ್ ಸರ್ಕಾರವಾದರೂ ನಿರ್ಮಿಸಬೇಕು. ಅದಕ್ಕೆ ನಮ್ಮ ಸಮಾಜ ಸಹಕರಿಸಲಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಸ್ಥಳ ಗುರುತಿಸಿ, ಸರ್ಕಾರಿ ಜಾಗ ನೀಡುತ್ತಿರುವುದು ಸ್ವಾಗತಾರ್ಹ ಎಂದರು.
ಚಿತ್ರದುರ್ಗದ ಪಾಳೆಗಾರರು ಉತ್ತಮ ಆಡಳಿತಕ್ಕೆ ಹೆಸರಾಗಿದ್ದರು. ಎಲ್ಲ ಸಮುದಾಯಗಳ ಹಿತ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸ ಮಾಡಿರುವುದನ್ನು ಮರೆಯುವಂತಿಲ್ಲ ಎಂದು ಹೇಳಿದರು.
ಮದಕರಿನಾಯಕ ಕೈಗೊಂಡ ಕೆಲಸ ಸೂರ್ಯ, ಚಂದ್ರ ಇರುವವರೆಗೆ ಶಾಶ್ವತ. ಸ್ವಾವಲಂಬನೆ, ದಕ್ಷ ಆಡಳಿತ ನಡೆಸಿದ ಪಾಳೆಗಾರರ ವಂಶಸ್ಥರು ಇಂದು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಪ್ರಾಮಾಣಿಕವಾಗಿ ಜೀವನ ನಡೆಸಿದ ಪರಿಣಾಮ ಬಡತನದಲ್ಲೇ ಇದ್ದಾರೆ. ಮುಂದಿನ ದಿನಗಳಲ್ಲಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುವುದು. ಮೈಸೂರಿನ ರಾಜ ವಂಶಸ್ಥರಿಗೆ ಸಿಗುವಂತೆ ಈ ವಂಶಸ್ಥರನ್ನು ಗೌರವಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಮಾತನಾಡಿ, ಸಮುದಾಯದ ಮುಕುಟ ಮಣಿ ಮದಕರಿನಾಯಕರ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಿಸಲು ಜಾಗ ಕಾಯ್ದಿರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಕರೆಸಿ ಪಾರ್ಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಮದಕರಿನಾಯಕ ಅನೇಕ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅವುಗಳನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸ ಸರ್ಕಾರದಿಂದ ಮಾಡಲಾಗುವುದು ಎಂದು ಭರವಸೆ ನೀಡಿದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ನಾಯಕ ಸಮುದಾಯದವರು ಯಾವುದೇ ಪಕ್ಷದಲ್ಲಿದ್ದರೂ ರಾಜಕೀಯ ಬದಿಗೊತ್ತಿ ಒಗ್ಗೂಡಬೇಕು. ಚುನಾವಣೆ ವೇಳೆ ಮಾತ್ರ ರಾಜಕೀಯ. ಉಳಿದಂತೆ ಸಮುದಾಯದ ವಿಚಾರ ಬಂದಾಗ ಭಿನ್ನಾಭಿಪ್ರಾಯ ಮರೆತು ಶಕ್ತಿ ಪ್ರದರ್ಶಿಸಬೇಕು. ಮದಕರಿನಾಯಕ ಥೀಮ್ ಪಾರ್ಕ್ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು. ಪ್ರತಿ ವರ್ಷ ದುರ್ಗೋತ್ಸವ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಇಮ್ಮಡಿ ಕೇತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಉದ್ಯಮಿ ಶ್ರೀನಿವಾಸ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಮಾಜಿ ಶಾಸಕ ಎಸ್.ಕೆ. ಬಸವರಾಜನ್, ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ. ಕೃಷ್ಣಮೂರ್ತಿ, ದೇವರಾಜ್ ಅರಸು ಶಿಕ್ಷಣ ಸಂಸ್ಥೆ ಸಿಇಒ ಎಂ.ಸಿ. ರಘುಚಂದನ್, ಕಲ್ಲವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡ ಯೋಗೀಶ್‌ಬಾಬು, ಗುಡ್ಡದೇಶ್ವರಪ್ಪ, ರತ್ನಮ್ಮ, ಅಂಜಿನಪ್ಪ ಸೇರಿ ವಿವಿಧ ಸಮಾಜದ ಅನೇಕ ಮುಖಂಡರು, ಗಣ್ಯರು ಭಾಗವಹಿಸಿದ್ದರು.
ಭವ್ಯ ಮೆರವಣಿಗೆ
ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ಮೆರವಣಿಗೆಯಲ್ಲಿ ಮೈಸೂರು ದಸರಾದಲ್ಲಿ ಬೆಂಗಳೂರು ವಿಭಾಗದಿಂದ ಪ್ರಥಮ ಸ್ಥಾನ ಪಡೆದ ರಾಜವೀರ ಮದಕರಿನಾಯಕ ಸ್ಥಬ್ದಚಿತ್ರ ಪ್ರಮುಖ ಆಕರ್ಷಣೆಯಾಗಿತ್ತು. ಅಲಂಕೃತ ಸಾರೋಟಿನಲ್ಲಿ ಮದಕರಿನಾಯಕರ ಭಾವಚಿತ್ರ ರಾರಾಜಿಸಿತು. ಕನಕ ವೃತ್ತದಿಂದ ಆರಂಭವಾದ ಮೆರವಣಿಗೆ ಗಾಂಧಿ ವೃತ್ತ, ಬಿ.ಡಿ. ರಸ್ತೆ, ಪ್ರವಾಸಿ ಮಂದಿರ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಮದಕರಿನಾಯಕ ಪ್ರತಿಮೆ ಬಳಿ ಸಂಪನ್ನಗೊಂಡಿತು. ಧ್ವನಿವರ್ಧಕಗಳ ಸದ್ದಿಗೆ ಯುವಕರು ಹೆಜ್ಜೆ ಹಾಕಿದರು.
ಗಮನಸೆಳೆದ ಲೇಜರ್ ಶೋ
ಮದಕರಿನಾಯಕರ ಪ್ರತಿಮೆಗೆ ಬೃಹತ್ ಹಾರ, ವೃತ್ತವನ್ನು ವಿದ್ಯುದ್ದೀಪ, ಹೂಗಳಿಂದ ಅಲಂಕರಿಸಲಾಗಿತ್ತು. ರಾತ್ರಿ 8ರ ನಂತರ ನಡೆದ ಲೇಜರ್ ಶೋ ಸೊಬಗನ್ನು ಅನೇಕರು ಕಣ್ತುಂಬಿಕೊಂಡರು.