

ಮೈಸೂರು: ಕೇಂದ್ರ ಸರ್ಕಾರದ ಅಧೀನದ ಸಾರ್ವಜನಿಕ ಸಂಸ್ಥೆ, ಕಾರ್ಖಾನೆಗಳು ಎಸ್ಸಿ-ಎಸ್ಟಿ ಉದ್ಯಮಿಗಳ ಕೈಗಾರಿಕೆಗಳಿಂದ ಕನಿಷ್ಠ ಶೇ.4ರಷ್ಟು ಉತ್ಪನ್ನಗಳನ್ನು ಖರೀದಿಸಬೇಕೆಂಬ ನಿಯಮ ಇದೆ. ಆದರೆ ಈ ವಿಷಯದಲ್ಲಿ ಶೇ.0.08ರಷ್ಟು ಪ್ರಗತಿಯೂ ಆಗಿಲ್ಲ ಎಂದು ಕೇಂದ್ರ ಸರ್ಕಾರದ ಎಂಎಸ್‌ಎಂಇ ಸಚಿವಾಲಯ ಅಧೀನದ ರಾಷ್ಟ್ರೀಯ ಎಸ್ಸಿ-ಎಸ್ಟಿ ಹಬ್‌ನ ಶಾಖಾ ಮುಖ್ಯಸ್ಥೆ ಎ.ಕೋಕಿಲಾ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಎಸ್ಸಿ-ಎಸ್ಟಿ ಉದ್ಯಮಿದಾರರ ಸಂಘ, ರಾಷ್ಟ್ರೀಯ ಸಣ್ಣ ಕೈಗಾರಿಕೆ ನಿಗಮದ ಸಹಯೋಗದಲ್ಲಿ ನಗರದ ರೋಟರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೈಗಾರಿಕೋದ್ಯಮಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶಾದ್ಯಂತ ಇರುವ ಅಂದಾಜು 200 ಸರ್ಕಾರಿ ಕೈಗಾರಿಕೆಗಳಿಗೆ ಎಸ್ಸಿ-ಎಸ್ಟಿ ಉದ್ಯಮಿಗಳ ಕೈಗಾರಿಕೆಗಳಿಂದ ಶೇ.4ರಷ್ಟು ಉತ್ಪನ್ನಗಳನ್ನು ಖರೀದಿಸಬೇಕೆಂಬ ಗುರಿ ನಿಗದಿಪಡಿಸಲಾಗಿದೆ. ಇದನ್ನು ಸಾಧಿಸಲು ಹೆಚ್ಚಿನ ಒತ್ತಡವನ್ನೂ ಹಾಕಲಾಗುತ್ತಿದೆ. ಆದರೆ ಎಸ್ಸಿ-ಎಸ್ಟಿ ಕೈಗಾರಿಕಾದ್ಯೋಮಿಗಳು ಇದರ ಲಾಭ ಪಡೆದುಕೊಳ್ಳುತ್ತಿಲ್ಲ ಎಂದರು.
ಕೇಂದ್ರ ಸರ್ಕಾರದ ಎಂಎಸ್‌ಎಂಇ ಸಚಿವಾಲಯ ಅಧೀನದ ‘ಎಂಎಸ್‌ಎಂಇ ಸಂಬಂಧ’ ಆನ್‌ಲೈನ್ ಪೋರ್ಟಲ್‌ನಲ್ಲಿ ಸರ್ಕಾರಿ ಕಾರ್ಖಾನೆಗೆ ಅಗತ್ಯವಾಗಿರುವ ಉತ್ಪನ್ನಗಳ ಪಟ್ಟಿ ಇದೆ. ಅವುಗಳು ಖರೀದಿಸುವ ಪಟ್ಟಿಯೂ ಅದರಲ್ಲಿ ಇದೆ. ಅದನ್ನು ಗಮನಿಸಿ ತಾವು ಉತ್ಪಾದಿಸುವ ವಸ್ತುಗಳನ್ನು ಇವುಗಳಿಗೆ ಮಾರಾಟ ಮಾಡಬಹುದು ಎಂದು ಸಲಹೆ ನೀಡಿದರು.
ಸರ್ಕಾರಿ ಕಾರ್ಖಾನೆಗಳೇ ಎಸ್ಸಿ-ಎಸ್ಟಿ ಕೈಗಾರಿಕೋದ್ಯಮಿಗಳಿಗೆ ದೊಡ್ಡ ಮಾರುಕಟ್ಟೆಯಾಗಿವೆ. ಯಾವುದೇ ವಸ್ತುಗಳನ್ನು ಉತ್ಪಾದಿಸಿ, ಪ್ರಚಾರಪಡಿಸಿ, ಮಾರಾಟ ಮಾಡಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವುದು ಕಷ್ಟಕರ. ಆದರೆ ಇಲ್ಲಿ ಸಿದ್ಧವಿರುವ ಮಾರುಕಟ್ಟೆಯನ್ನು ಬಳಸಿಕೊಂಡು, ಸರ್ಕಾರಿ ಕಾರ್ಖಾನೆಗಳಿಗೆ ಅಗತ್ಯ ಇರುವ ವಸ್ತುಗಳನ್ನು ಉತ್ಪಾದಿಸುವುದು ಸರಳ ಮತ್ತು ಸುಲಭ ಕೆಲಸವಾಗಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು ಎಂದರು.
ಮಾರಾಟ ಮಾಡುವ ವಸ್ತುಗಳ ಪ್ರತಿಯಾಗಿ ಸರ್ಕಾರಿ ಸ್ವೌಮ್ಯದ ಸಂಸ್ಥೆಗಳಿಂದ ನಿಶ್ಚಿತವಾಗಿ ಹಣ ಸಂದಾಯವಾಗುತ್ತಿದೆ. ಇದರಲ್ಲಿ ಯಾವುದೇ ರಿಸ್ಕ್ ಇರಲ್ಲ ಎಂದರು.
ಪರಿಶಿಷ್ಟ ಸಮುದಾಯದ ನವೋದ್ಯಮಿಗಳು ಸರ್ಕಾರಿ ಕೈಗಾರಿಕೆಗಳಿಗೆ ಟೆಂಡರ್ ಹಾಕಿ ವಸ್ತುಗಳನ್ನು ಮಾರಾಟ ಮಾಡಬೇಕು. ಗವರ‌್ನಮೆಂಟ್ ಇ ಮಾರುಕಟ್ಟೆ(ಜಿಇಎಂ ಆನ್‌ಲೈನ್ ಪೋರ್ಟಲ್)ನಲ್ಲಿ ನೋಂದಣಿಯಾಗಬೇಕು. ಇದರಿಂದ ಟೆಂಡರ್ ಹಾಕುವ, ಟೆಂಡರ್ ಪ್ರಕ್ರಿಯೆಗೆ ಅವಕಾಶ ದೊರೆಯಲಿದೆ. ಈ ಕುರಿತು ನಮ್ಮ ಸಂಸ್ಥೆ ಸಹಾಯ ಮತ್ತು ನೆರವು ನೀಡಲಿದೆ ಎಂದು ಮಾಹಿತಿ ನೀಡಿದರು.
ಟೆಂಡರ್ ಹಾಕಲು ಇಎಂಡಿ ಹಣದ ಕೊರತೆ ಉಂಟಾದರೆ, ಅದಕ್ಕೂ ಸಹಾಯ ಮಾಡಲಾಗುತ್ತದೆ. ನಮ್ಮ ಸಂಸ್ಥೆಯಲ್ಲಿ ನೋಂದಣಿಯಾದ ಸಂಸ್ಥೆಗೆ ಪ್ರಮಾಣಪತ್ರ ನೀಡಲಾಗುತ್ತದೆ. ಅದನ್ನು ಆಧರಿಸಿ ಟೆಂಡರ್ ಹಾಕಿದರೆ ಸರ್ಕಾರಿ ಸ್ವೌಮ್ಯದ ಕಾರ್ಖಾನೆಗಳಿಗೆ ಇಎಂಡಿ ಹಣ ಕಟ್ಟುವ ಅಗತ್ಯವಿಲ್ಲ. ಇಂತಹ ಟೆಂಡರ್‌ಗೆ ಅನುಮೋದನೆ ನೀಡಬೇಕು. ಅದಕ್ಕಾಗಿ ಈ ಪ್ರಮಾಣಪತ್ರ ಪಡೆಯಲು ನಮ್ಮ ಸಂಸ್ಥೆಗೆ ಕೇವಲ ತೆರಿಗೆ ಸಹಿತ 118 ರೂ. ಪಾವತಿಸಿದರೆ ಸಾಕು ಎಂದರು.
ರಾಜ್ಯ ಸರ್ಕಾರದ ಕೆಲ ಇಲಾಖೆಗಳಲ್ಲೂ ಈ ಪ್ರಮಾಣಪತ್ರ ಲಗತ್ತಿಸುವ ಮೂಲಕ ಇಎಂಡಿಯಿಂದಲೂ ರಿಯಾಯಿತಿ ದೊರೆಯುತ್ತಿದೆ. ಇದು ದೊಡ್ಡ ಅವಕಾಶವಾಗಿದೆ. ಇದನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.
ದೇಶಾದ್ಯಂತ ನಡೆಯುವ ಸರ್ಕಾರಿ ವಸ್ತುಪ್ರದರ್ಶನಗಳಲ್ಲಿ ಪರಿಶಿಷ್ಟ ಕೈಗಾರಿಕೋದ್ಯಮಿಗಳ ಉತ್ಪನ್ನಗಳನ್ನು ಮಾರಾಟ ಮತ್ತು ಪ್ರದರ್ಶನಕ್ಕೆ ಇಡಬಹುದು. ಮಳಿಗೆ ವೆಚ್ಚ ಮತ್ತು ಪ್ರಯಾಣದ ವೆಚ್ಚವನ್ನು ನಮ್ಮ ಸಂಸ್ಥೆಯಿಂದಲೇ ಭರಿಸಲಾಗುತ್ತದೆ. ಎಸ್ಸಿ-ಎಸ್ಸಿ ಕೈಗಾರಿಕೋದ್ಯಮಿಗಳಿಗೆ ಅನೇಕ ಸರ್ಕಾರಿ ಸೌಲಭ್ಯಗಳಿವೆ. ಅವುಗಳನ್ನು ಬಳಸಿಕೊಂಡು ಮುಂದೆ ಬರಬೇಕು ಎಂದು ತಿಳಿಸಿದರು.
ಎನ್‌ಎಸ್‌ಐಸಿ ಉಪಪ್ರಧಾನ ವ್ಯವಸ್ಥಾಪಕ ವಿ.ಸುರೇಶ್‌ಬಾಬು, ತಿರಪುರ ಖಾದಿ ಸ್ಟೋರ್ಸ್‌ನ ಮಾಲೀಕ ಆರ್.ಮೂರ್ತಿ, ಮೈಸೂರು ಚಾಮರಾಜನಗರ, ಕೊಡಗು ಜಿಲ್ಲಾ ಎಸ್ಸಿ-ಎಸ್ಟಿ ಕೈಗಾರಿಕೋದ್ಯಮಿಗಳ ಸರಕು, ಸಲಕರಣೆ, ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ವಿಜಯಶಂಕರ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕ ವರದರಾಜು, ಕೆಎಸ್‌ಎಫ್‌ಸಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಎ.ಟಿ.ನಟರಾಜ್, ಲೀಡ್ ಬ್ಯಾಂಕ್ ಮ್ಯಾನೇಜರ್ ರಾಜೇಶ್ ಇನ್ನಿತರರಿದ್ದರು.