ಸರ್ಕಾರಿ ಕಟ್ಟಡಗಳ ಮೇಲೆ ಬಿಜೆಪಿ ಭಿತ್ತಪತ್ರ

04SPT05
Published on

ಸೋಮವಾರಪೇಟೆ: ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದ ಸರ್ಕಾರಿ ಕಟ್ಟಡಗಳ ಮೇಲೆ ಆಡಳಿತ ಪಕ್ಷ ಬಿಜೆಪಿಯ ಅಭಿವೃದ್ಧಿ ಕಾರ್ಯಗಳ ಭಿತ್ತಿಪತ್ರಗಳನ್ನು ಅಂಟಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.


ಬೆಳಗಾಗುವುದರೊಳಗೆ, ಪಂಚಾಯಿತಿ ಕಚೇರಿ ಆವರಣದ ಗೋಡೆ, ಗ್ರಂಥಾಲಯ, ವಾಣಿಜ್ಯ ಮಳಿಗೆ, ಸಮುದಾಯ ಭವನ, ಶಾಲಾ ಆವರಣ ಗೋಡೆ ಸೇರಿದಂತೆ, ಸರ್ಕಾರದ ಪ್ರಚಾರ ಫಲಕಗಳ ಮೇಲೂ ಭಿತ್ತಿ ಪತ್ರಗಳನ್ನು ಅಂಟಿಸಲಾಗಿದೆ. ಇದನ್ನು ವಿರೋಧಿಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದರು.


ಸ್ಥಳೀಯರು ಹಾಗೂ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಸದಸ್ಯ ಕೆ.ಎ. ಯಾಕೂಬ್ ಮಾತನಾಡಿ, ಇದು ಕಾನೂನು ವಿರೋಧಿ ಕೃತ್ಯವಾಗಿದ್ದು, ಎಲ್ಲೆಡೆ ಅಂಟಿಸಿರುವವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು.


ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಿತ್ ಹಾಗೂ ಗ್ರಾಮಸ್ಥರಾದ ಸತೀಶ್ ಅವರುಗಳು ಕ್ರಮವನ್ನು ಖಂಡಿಸಿದರು.


ಈ ಬಗ್ಗೆ ಪಿಡಿಒ ರಮೇಶ್ ಪ್ರತಿಕ್ರಿಯಿಸಿ, ಭಿತ್ತಿ ಪತ್ರ ಅಂಟಿಸಲು ಅನುಮತಿ ಪಡೆದಿಲ್ಲ. ರಾತ್ರಿ ಬಂದು ಅಂಟಿಸಿದ್ದಾರೆ. ಇವರ ವಿರುದ್ಧ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಪತ್ರಿಕೆಗೆ ತಿಳಿಸಿದರು.


ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರ ಅದೇಶದ ಮೇರೆಗೆ ಭಿತ್ತಿ ಪತ್ರಗಳ ಮೇಲೆ ಸಂಜೆ ಬಣ್ಣ ಬಳಿಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net