

ಚಿತ್ರದುರ್ಗ: ಆಟೋಟಗಳಲ್ಲಿ ಭಾಗವಹಿಸುವುದರಿಂದ ಸರ್ಕಾರಿ ಉದ್ಯೋಗದಲ್ಲಿ ಕ್ರೀಡಾ ಮೀಸಲಾತಿ ಪಡೆಯಲು ಸಾಧ್ಯವಾಗಲಿದೆ ಎಂದು ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಆರ್. ಶಿವಣ್ಣ ಹೇಳಿದರು.
ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ, ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಗುರುವಾರ ಏರ್ಪಡಿಸಿದ್ದ 2025-26ನೇ ಶೈಕ್ಷಣಿಕ ಸಾಲಿನ ದಾವಣಗೆರೆ ವಿಶ್ವ ವಿದ್ಯಾನಿಲಯದ ಅಂತರ ಕಾಲೇಜು ಪುರುಷ ಹಾಗೂ ಮಹಿಳೆಯರ ವೇಟ್‌ಲಿಫ್ಟಿಂಗ್, ಪವರ್‌ಲಿಫ್ಟಿಂಗ್ ಮತ್ತು ಪುರುಷರ ದೇಹದಾರ್ಢ್ಯ ಸ್ಫರ್ಧೆ ಉದ್ಘಾಟಿಸಿ ಮಾತನಾಡಿ, ಪಠ್ಯದಷ್ಟೇ ಕ್ರೀಡೆಗೂ ಪ್ರಾಮುಖ್ಯತೆ ಕೊಡಬೇಕಿದೆ ಎಂದರು.
ರಾಷ್ಟ್ರೀಯ ತೀರ್ಪುಗಾರ ಎನ್.ಡಿ. ಕುಮಾರ್ ಮಾತನಾಡಿ, ಪಾಲಕರು ಮಕ್ಕಳನ್ನು ಅಂಕಗಳಿಸುವ ಯಂತ್ರಗಳನ್ನಾಗಿ ಮಾಡಲು ಮುಂದಾಗಿದ್ದಾರೆ ಹೊರತು ಉತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸಲು ಇಚ್ಛಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ರಾಷ್ಟ್ರೀಯ ಪವರ್ ಲಿಫ್ಟಿಂಗ್ ತರಬೇತುದಾರ ಕೆ. ಕುಮಾರ್, ರಾಜ್ಯ ಪವರ್ ಲಿಫ್ಟಿಂಗ್ ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಸಂಸ್ಥೆ ಉಪಾಧ್ಯಕ್ಷ ಬಸವರಾಜು, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರಪ್ಪ, ಹನುಮಂತಪ್ಪ, ರೇಖಾ, ದೇವೇಂದ್ರಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ರಾಘವೇಂದ್ರ ಇತರರು ಇದ್ದರು.
ಪಂದ್ಯಾವಳಿಯಲ್ಲಿ ದಾವಣಗೆರೆ ವಿವಿ ವ್ಯಾಪ್ತಿಯ 40 ಕಾಲೇಜುಗಳಿಂದ 250 ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.