ಸರ್ಕಾರಿ ಇಲಾಖೆಗಳಲ್ಲಿ ದಲ್ಲಾಳಿಗಳ ಉಪಟಳ

18
Published on

ಕಂದಾಯ ಅದಾಲತ್​ನಲ್ಲಿ 129 ಅರ್ಜಿ ಸ್ವೀಕಾರ ಕಡಿವಾಣಕ್ಕೆ ಡಾ.ರಂಗನಾಥ್​ ಸೂಚನೆ

ಕುಣಿಗಲ್​: ಸರ್ಕಾರಿ ಕಚೇರಿಗಳಲ್ಲಿ ದಲ್ಲಾಳಿಗಳ ಉಪಟಳ ಹೆಚ್ಚಾಗಿದೆ, ಅಮಾಯಕ ಜನರಿಂದ ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಶಾಸಕ ಡಾ.ಎಚ್​.ಡಿ.ರಂಗನಾಥ್​ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ಕಂದಾಯ ಅದಾಲತ್​ನಲ್ಲಿ ಮಾತನಾಡಿ, ರಾಗಿ ಖರೀದಿ ಕೇಂದ್ರ, ಪುರಸಭೆ, ಕಂದಾಯ ಇಲಾಖೆ ಸೇರಿ ಇತರ ಸರ್ಕಾರಿ ಇಲಾಖೆಗಳಲ್ಲಿ ದಲ್ಲ್ಲಾಳಿಗಳ ಕಾಟ ಹೆಚ್ಚಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಇಂತಹ ವ್ಯವಸ್ಥೆಗೆ ಕಡಿವಾಣ ಹಾಕಬೇಕು. ಮೋಸಕ್ಕೆ ಸಾರ್ವಜನಿಕರ ಬಲಿಯಾಗಬೇಡಿ, ಏನೆ ಕೆಲಸವಿದ್ದರೂ, ನೇರವಾಗಿ ತಹಸೀಲ್ದಾರ್​ ಅಥವಾ ನಮ್ಮ ಕಚೇರಿಗೆ ಬನ್ನಿ. ಯಾರಿಗೂ ಹಣ ನೀಡುವ ಅವಶ್ಯಕತೆ ಇಲ್ಲ ಎಂದರು.

ತಹಸೀಲ್ದಾರ್​ ಯು.ರಶ್ಮಿ ಮಾತನಾಡಿ, ಜಮೀನಿ ದಾಖಲೆ ಕೊಡಿಸುವುದಾಗಿ ರೈತರಿಂದ ದಲ್ಲಾಳಿಗಳು ಲಾಂತರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ದಲ್ಲಾಳಿಗಳು ಮಾಡುತ್ತಿರುವ ಕೆಲಸದಿಂದ ಅಧಿಕಾರಿಗಳನ್ನು ಜನರು ಕೆಟ್ಟ ಭಾವನೆಯಿಂದ ನೋಡುವಂತ್ತಾಗಿದೆ ಎಂದರು. ಇದರಿಂದ ಕೆಂಡಾಮಂಡಲರಾದ ಶಾಸಕರು, ಕೂಡಲೇ ಆ ರೈತನಿಂದ ದೂರು ಪಡೆದು ಪ್ರಕರಣ ದಾಖಲಿಸುವಂತೆ ತಹಸೀಲ್ದಾರ್​ಗೆ ಸೂಚಿಸಿದರು.

ತಾಲೂಕು ಕಚೇರಿಯಲ್ಲಿ ದಾಖಲೆಗಳಿಗಾಗಿ ರೈತರು ಅಲೆಯಬಾರದೆಂದು ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಈಗಾಗಲೇ 6 ಲಕ್ಷ ಪೇಜ್​ ರೈತರ ದಾಖಲೆಗಳನ್ನು ಸ್ಕ್ಯಾನ್​ ಮಾಡಲಾಗಿದೆ, ಮೂರು ತಿಂಗಳಲ್ಲಿ ಕಂದಾಯ ಇಲಾಖೆಗೆ ಸೇರಿದ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುವುದೆಂದು ಶಾಸಕರು ಹೇಳಿದರು. ತಾಲೂಕಿನಲ್ಲಿ ಶೇ.85 ರೈತರು ಮಾತ್ರ ಪಹಣಿಗೆ ಆಧಾರ್​ ಸೀಡಿಂಗ್​ ಮಾಡಿಸಿದ್ದಾರೆ. ಇನ್ನು ಶೇ.15 ರೈತರು ಆಧಾರ್​ ಸೀಡಿಂಗ್​ ಮಾಡಿಸಿಲ್ಲ ಬೇಗ ಮಾಡಿಸಿಕೊಳ್ಳಿ ಎಂದು ತಹಸೀಲ್ದಾರ್​ ರಶ್ಮಿ ತಿಳಿಸಿದರು. ಇದೇ ವೇಳೆ ವಿವಿಧ ಸೌಲಭ್ಯಕ್ಕಾಗಿ ನಾಗರಿಕರಿಂದ 129 ಅರ್ಜಿಗಳು ಸ್ವೀಕಾರಗೊಂಡವು. ವೆಂಕಟೇಶಮೂರ್ತಿ, ರವೀಂದ್ರ, ಜಗದೀಶ್​, ಆರ್​ಐಗಳಾದ ಮಹೇಶ್​, ಮುರುಳಿ, ರವಿ, ಸಂತೋಷ್​, ಪುರುಷೋತ್ತಮ್​, ವಿಜಯಕುಮಾರ್​ ಮತ್ತಿತರರು ಇದ್ದರು.

ರಸ್ತೆಗೆ ತೊಂದರೆ ನೀಡಬೇಡಿ : ಕಾಲು ದಾರಿ, ಬಂಡಿ ದಾರಿಗೆ ಸಂಬಂಧಿದಂತೆ ತಾಲೂಕಿನಲ್ಲಿ 250 ಕ್ಕೂ ಅಧಿಕ ಅರ್ಜಿಗಳು ಬಂದಿವೆ, ನಕಾಶೆ ರಸ್ತೆ ಇದ್ದರೇ ಮಾತ್ರ ರಸ್ತೆ ಬಿಡಿಸಲು ತಹಸೀಲ್ದಾರ್​ಗೆ ಅಧಿಕಾರ ಇದೆ, ರೈತರು ಕಾಲು ದಾರಿ, ಬಂಡಿದಾರಿ ಓಡಾಡಲು ತೊಂದರೆ ನೀಡಬೇಡಿ ಎಂದು ತಹಸೀಲ್ದಾರ್​ ಮನವಿ ಮಾಡಿದರು. ರಾಜಕೀಯ ಹಾಗೂ ದ್ವೇಷಕ್ಕಾಗಿ ರೈತರಿಗೆ ತೊಂದರೆ ನೀಡಬೇಡಿ, ಸಾಗುವಳಿ ಮತ್ತು ಹಿಡುವಳಿ ಜಮೀನಿಗೆ ತಿರುಗಾಡಲು, ಅಡ್ಡಿ ಪಡಿಸಿದರೇ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಶಾಸಕರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net