

ಚಳ್ಳಕೆರೆ: ಬಡಕುಟುಂಬಗಳ ಆರೋಗ್ಯ ಸೇವೆಗೆ ಆಧಾರವಾಗಿರುವ ಸರ್ಕಾರಿ ಆಸ್ಪತ್ರೆಯ ಸೇವಾ ಬಲವರ್ಧನೆಗೆ ಸಂಘ-ಸಂಸ್ಥೆಗಳ ಸಹಕಾರ ಸಿಗುವಂತಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.
ನಗರದ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ಲಯನ್ಸ್ ಕ್ಲಬ್ ವತಿಯಿಂದ 12 ಲಕ್ಷ ರೂ. ಮೌಲ್ಯದ ಡಯಾಲಿಸಿಸ್ ಯಂತ್ರದ ಕೊಡುಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘ-ಸಂಸ್ಥೆಗಳ ಸೇವಾ ಮನೋಭಾವನೆಯಿಂದ ನೀಡಿದ ಡಯಾಲಿಸಿಸ್ ಯಂತ್ರ ಬಡರೋಗಿಗಳ ಆರೋಗ್ಯ ಸೇವಾ ಕಾರ್ಯಕ್ಕೆ ಸದುಪಯೋಗ ಆಗಬೇಕು. ಕಳೆದ ಕಾಂಗ್ರೆಸ್ ಅವಧಿಯಲ್ಲಿ ಜಿಲ್ಲೆಗೊಂದು ಡಯಾಲಿಸಿಸ್ ಸೆಂಟರ್ ಆರಂಭಿಸಿದ ಯೋಜನೆಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಜನಪರ ಆಡಳಿತ ಮಾಡುವ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬಡ ಜನರ ಆರೋಗ್ಯ ಸೇವೆಗೆ ಅಗತ್ಯ ಇರುವ ಸೌಕರ್ಯ ಕಲ್ಪಿಸಲಾಗುವುದು ಎಂದರು.
ಚಳ್ಳಕೆರೆ ಸೇರಿ ನೆರೆಹೊರೆಯ ತಾಲೂಕು ಭಾಗಗಳಿಂದಲೂ ಬರುವ ರೋಗಿಗಳ ಸಂಖ್ಯೆ ಅಧಿಕವಿದೆ. ರೋಗಿಗಳ ಅನುಕೂಲಕ್ಕಾಗಿ ಬೆಡ್‌ಗಳ ವ್ಯವಸ್ಥೆ ಹೆಚ್ಚಳ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸೆ ಬಡಜನತೆಗೆ ಸದುಪಯೋಗ ಆಗಬೇಕು. ಡಯಾಲಿಸಿಸ್ ಸೆಂಟರ್ ಸೇರಿ ಯಾವುದೇ ಪರಿಕರಗಳು ದುರಸ್ತಿ ಆದ ಕೂಡಲೇ ಅದನ್ನು ಮೂಲೆಗೆ ತಳ್ಳದೆ ನನ್ನ ಗಮನಕ್ಕೆ ತಿಳಿಸುವ ಕೆಲಸ ಆಗಬೇಕು ಎಂದು ಸೂಚಿಸಿದರು.
ಆಡಳಿತ ವೈದ್ಯಾಧಿಕಾರಿ ಡಾ.ಜೆ.ಡಿ.ವೆಂಕಟೇಶ್ ಮಾತನಾಡಿ, ಆಸ್ಪತ್ರೆಯಲ್ಲಿ ಒಂದೇ ಒಂದು ಡಯಾಲಿಸಿಸ್ ಸೆಂಟರ್ ಇತ್ತು. ಇದರಿಂದ ಪ್ರತಿದಿನ ಬರುತ್ತಿದ್ದ ರೋಗಿಗಳ ತಪಾಸಣೆಗೆ ತೀವ್ರ ತೊಂದರೆ ಆಗಿತ್ತು. ಲಯನ್ಸ್ ಕ್ಲಬ್‌ನ ಕೊಡುಗೆ ತುಂಬಾ ನೆರವಾಗಲಿದೆ ಎಂದು ಹೇಳಿದರು.
ಲಯನ್ಸ್ ಕ್ಲಬ್ ಜಿಲ್ಲಾಧ್ಯಕ್ಷ ಎಂ.ಕೆ.ಭಟ್, ತಾಲೂಕು ಅಧ್ಯಕ್ಷ ಎಸ್.ಕೆ.ಮರಳಿ, ಸದಸ್ಯರಾದ ರವಿ, ಸಿದ್ದಾರ್ಥ ಇತರರಿದ್ದರು.