

ಚಿತ್ರದುರ್ಗ: ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚುವಂತೆ ಮೂರ‌್ನಾಲ್ಕು ದಿನಗಳ ಹಿಂದೆ ಹೊರಡಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಆದೇಶವನ್ನು ಸಂಸದ ಗೋವಿಂದ ಎಂ. ಕಾರಜೋಳ ಖಂಡಿಸಿದ್ದಾರೆ.
ಬಡವರ ಬಗ್ಗೆ ಕನಿಷ್ಠ ಕಾಳಜಿಯಿಲ್ಲದ, ಸಂವೇದನಾ ರಹಿತ ಸರ್ಕಾರದ ಮುರ್ಖತನದ ನಿರ್ಧಾರ ಇದಾಗಿದೆ ಎಂದು ಗುಡುಗಿದ್ದಾರೆ.
ಕಡುಬಡವರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧ ಪೂರೈಸಲು ಕೇಂದ್ರ ಸರ್ಕಾರ 2008ರಿಂದ ದೇಶಾದ್ಯಂತ 16,290 ಜನೌ ಷಧ ಕೇಂದ್ರಗನ್ನು ತೆರೆದಿದೆ. ಕರ್ನಾಟಕದಲ್ಲಿರುವ 1459 ಕೇಂದ್ರಗಳ ಪೈಕಿ 400ಕ್ಕೂ ಅಧಿಕ ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿವೆ. ಇವುಗಳ ಮೂಲಕ ಅಂದಾಜು 2047 ಬಗೆಯ ಔಷಧ, 300ಕ್ಕೂ ಹೆಚ್ಚು ಸರ್ಜಿಕಲ್ ಉಪಕರಣಗಳು ಅತ್ಯಂತ ರಿಯಾಯಿತಿ ದರದಲ್ಲಿ ದೊರೆಯುತ್ತವೆ.
ಕಾಂಗ್ರೆಸ್ಸಿಗೆ ನಿಜವಾಗಿಯೂ ಬಡವರ, ದಲಿತರ ಬಗ್ಗೆ ಕಾಳಜಿಯಿದ್ದಿದ್ದೇ ಆದರೆ ಕೂಡಲೇ ಈ ಆದೇಶ ಹಿಂಪಡೆಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧ ಪೂರೈಸುತ್ತೇವೆ, ಆಸ್ಪತ್ರೆಗಳ ಆವರಣದಲ್ಲಿರುವ ಈ ಕೇಂದ್ರಗಳಲ್ಲಿ ಖರೀದಿಸುವುದು ಬೇಡ ಎಂಬ ಸಮಜಾಯಿಷಿಯನ್ನು ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಕೊಟ್ಟಿದ್ದಾರೆ. ಆದರೆ, ಎಷ್ಟು ಆಸ್ಪತ್ರೆಗಳಲ್ಲಿ ಎಲ್ಲ ಔಷಧಗಳು ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುತ್ತಿವೆ ಎಂಬುದನ್ನು ಮೊದಲು ಅವರು ಖಚಿತಪಡಿಸಿಕೊಳ್ಳಲಿ.
ಸರ್ಕಾರ ಪೂರೈಸಿದ್ದ ರಿಂಗರ್ ಲ್ಯಾಕ್ಟೇಟ್ ದ್ರಾವಣದಿಂದ ರಾಜ್ಯದಲ್ಲಾದ ಬಾಣಂತಿಯರ ಸಾವಿನ ಕುರಿತು ಆರೋಗ್ಯ ಸಚಿವರಿಗೆ ಅರಿವಿದೆಯಾ? ಲಕ್ಷಾಂತರ ಜನರಿಗೆ ವರದಾನವಾಗಿರುವ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಕೈಬಿಡಬೇಕು. ಔಷಧಗಳಿಲ್ಲದೆ ರೋಗಿಗಳ ಆಕ್ರೋಶಕ್ಕೆ ಅಸಹಾಯಕ ಸರ್ಕಾರಿ ವೈದ್ಯರು ಬಲಿಯಾಗುತ್ತಿದ್ದಾರೆ ಎಂದರು.
ಆಸ್ಪತ್ರೆಗಳ ಆವರಣಗಳಲ್ಲಿರುವ ಕೇಂದ್ರಗಳನ್ನು ಮುಚ್ಚುವುದರ ಜತೆಗೆ ಹೊಸ 31ಕ್ಕೂ ಹೆಚ್ಚು ಪ್ರಸ್ತಾವನೆಗಳನ್ನು ತಿರಸ್ಕರಿಸುವ ನಿರ್ಧಾರ ದಿಂದ ರಾಜ್ಯದ ಜನರಿಗೆ ಘೋರ ಅನ್ಯಾಯವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ಬಡಜನರಿಗೆ ಅಂದಾಜು 30 ಸಾವಿರ ಕೋಟಿ ರೂ. ಔಷಧ ಖರೀದಿಯಲ್ಲಿ ಉಳಿತಾಯವಾದಂತಾಗಿದೆ ಎಂದು ಸಂಸದರು ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.