ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಗೆ ಸಿಡಿಮಿಡಿ

16-7jvg02
 ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಅವ್ಯವಸ್ಥೆ ಕಂಡು ಸಿಡಿಮಿಡಿಗೊಂಡರು. ಡಿವೈಎಸ್‌ಪಿ ಗೀತಾ ಬೇನಾಳ ಇದ್ದರು.
Published on

ಜೇವರ್ಗಿ: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಅವ್ಯವಸ್ಥೆ ಕಂಡು ವೈದ್ಯಾಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.

ಮಾರಡಗಿ(ಎಸ್‌ಎ) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬಿಸಿಯೂಟ ಸೇವಿಸಿದ ೬೮ ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ವಿಷಯ ತಿಳಿದು ಇಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳ ಆರೋಗ್ಯ ವಿಚಾರಿಸಲು ಬಂದಿದ್ದ ಲೋಕಾಯುಕ್ತರಿಗೆ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಕೆಲಸ ಮಾಡಲು ಬರುತ್ತೀರಾ ಅಥವಾ ಪುಸ್ತಕದಲ್ಲಿ ಹಾಡು ಬರೆಯಲು ಬರುತ್ತೀರಾ ಎಂದು ತರಾಟೆಗೆ ತೆಗೆದುಕೊಂಡರು. ಮುಂದೆ ಇಂಥ ನಿರ್ಲಕ್ಷ್ಯಕಂಡುಬಂದರೆ ಶಿಸ್ತು ಕ್ರಮ ಜರುಗಿಸಬೇಕಾದೀತು ಎಂದು ಎಚ್ಚರಿಸಿದರು.

ಆಸ್ಪತ್ರೆ ಶೌಚಗೃಹ ಹಾಗೂ ಹೊರರೋಗಿಗಳ ಕೋಣೆಗಳಲ್ಲಿನ ಅಸ್ವಚ್ಛತೆ ಕಂಡು ಮೇಲ್ವೀಚಾರಕ ವೈದ್ಯಾಧಿಕಾರಿ ವಿರುದ್ಧ ಸಿಡಿದೆದ್ದ ಅವರು, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದರು. ಹೊರರೋಗಿಗಳ (ಒಪಿಡಿ) ದಾಖಲಾತಿ ಪುಸ್ತಕದಲ್ಲಿ ರೋಗಿಗಳ ಮಾಹಿತಿ ಬದಲು ಡಾ.ರಾಜಕುಮಾರ್ ನಟಿಸಿರುವ ಎರಡು ಕನಸು ಚಿತ್ರದ ಹಾಡು ಬರೆದಿರುವುದನ್ನು ಕಂಡು ಸಿಬ್ಬಂದಿ ವಿರುದ್ಧ ರೇಗಾಡಿದರು.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಆಸ್ಪತ್ರೆಯಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಸಿಬ್ಬಂದಿ ಚಲನಚಿತ್ರಗಳ ಹಾಡು ಬರೆಯುತ್ತಾರೆ ಎಂದರೆ ಎನರ್ಥ? ಮಾಜಿ ಮುಖ್ಯಮಂತ್ರಿ ಡಾ.ಧರ್ಮಸಿಂಗ್ ಕ್ಷೇತ್ರ ಇದಾಗಿದೆ ಎಂದು ವೈದ್ಯಾಧಿಕಾರಿ ಡಾ.ಸುರೇಶ ಮೇಕಿನ್ ಅವರನ್ನು ಸಿದ್ದರಾಜು ತರಾಟೆಗೆ ತೆಗೆದುಕೊಂಡರು.

ಲೋಕಾಯುಕ್ತ ಡಿವೈಎಸ್‌ಪಿ ಗೀತಾ ಬೇನಾಳ, ತಾಲೂಕು ಆರೋಗ್ಯಾಧಿಕಾರಿ ಡಾ.ಉಮೇಶ ಶರ್ಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net