ಸರ್ಕಾರವೇ ಆಚರಿಸಲಿ ಅಕ್ಕನ ಜಯಂತಿ

akka mahadevi
Published on

ಬೀದರ್: ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತ್ಯುತ್ಸವ ರಾಜ್ಯ ಸರ್ಕಾರ ವತಿಯಿಂದ ಆಚರಣೆಗೆ ಕ್ರಮ ಕೈಗೊಳ್ಳಬೇಕೆಂದು ಬೇಮಳಖೇಡ್- ಗೋರ್ಟಾದ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಆಗ್ರಹಿಸಿದರು.

ಇಲ್ಲಿನ ನೌಬಾದ್ ಹತ್ತಿರದ ಜ್ಞಾನ ಶಿವಯೋಗಾಶ್ರಮದಲ್ಲಿ ಆಯೋಜಿಸಿದ ಅಕ್ಕಮಹಾದೇವಿ ಜಯಂತಿ ಮಹೋತ್ಸವ ಮತ್ತು ಸಿದ್ಧೇಶ್ವರ ನಗರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಅಕ್ಕಮಹಾದೇವಿ ನೂತನ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮಾತನಾಡಿ, ಭಕ್ತಿ, ಜ್ಞಾನ ಮತ್ತು ವೈರಾಗ್ಯಗಳ ತ್ರಿವೇಣಿ ಸಂಗಮ ಎನಿಸಿರುವ ಅಕ್ಕಮಹಾದೇವಿ ಜಾಗತಿಕ ಮಹಿಳೆಯರ ಸ್ವಾಭಿಮಾನದ ಸಂಕೇತ. ಅವರ ಜಯಂತಿ ಸರ್ಕಾರವೇ ಆಚರಿಸಬೇಕು ಎಂದರು.

ಜ್ಞಾನದ ಖಣಿಯಾಗಿರುವ ಅಕ್ಕ ಕನ್ನಡದ ಪ್ರಥಮ ಕವಯತ್ರಿ. ಜಗತ್ತು ಇಷ್ಟೊಂದು ಪ್ರಗತಿ ಸಾಧಿಸಿದರೂ ಮಹಿಳೆಯರ ಮೇಲಿನ ಅನ್ಯಾಯ, ಅತ್ಯಾಚಾರ, ದಬ್ಬಾಳಿಕೆ ಇನ್ನೂ ಕಮ್ಮಿಯಾಗಿಲ್ಲ. ಇಂಥ ಕೆಟ್ಟ ಸಂಸ್ಕೃತಿ ತೊಲಗಬೇಕು. ಅಕ್ಕ ಮಹಾದೇವಿ ಸ್ತ್ರೀ ಸಮುದಾಯಕ್ಕೆ ಸ್ವಾಭಿಮಾನದ ಸಂಕೇತ ಎಂದು ಹೇಳಿದರು.

ನಗರಸಭೆ ಸದಸ್ಯೆ ಮಹಾದೇವಿ ಹುಮನಾಬಾದೆ ಸಮಾರಂಭ ಉದ್ಘಾಟಿಸಿದರು. ಪ್ರಮುಖರಾದ ಕೆ.ಎಚ್. ಪಾಟೀಲ್, ಬಸವ ಪ್ರಕಾಶ, ಕೆ.ಭದ್ರಶೆಟ್ಟಿ, ಸರಸ್ವತಿಬಾಯಿ ಗೌರಶೆಟ್ಟಿ, ವೀರೇಶ ಘಾಳೆಪ್ಪ, ಗಂಗಾಧರ ಸ್ವಾಮಿ ಇತರರಿದ್ದರು. ಮಹಾದೇವಪ್ಪ ಭಂಗೂರೆ ಸ್ವಾಗತಿಸಿದರು.

ಸಿದ್ಧೇಶ್ವರ ನಗರದಲ್ಲಿ ಕಾರ್ಯಕ್ರಮ: ನೌಬಾದ್ ಸಮೀಪದ ಸಿದ್ಧೇಶ್ವರ ಕಾಲನಿಯಲ್ಲಿ ಅಕ್ಕನ ಬಳಗ ವತಿಯಿಂದ ಅಕ್ಕ ಮಹಾದೇವಿ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ ಅದ್ದೂರಿಯಾಗಿ ಜರುಗಿತು. ಅಕ್ಕನ ಬಳಗದ ಅಧ್ಯಕ್ಷೆ ಶಾಂತಮ್ಮ ಮುಂದಾಳತ್ವದಲ್ಲಿ ಶ್ರೀ ಡಾ.ರಾಜಶೇಖರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಿತು. ಹನುಮಾನ ಮಂದಿರದಿಂದ ಅಕ್ಕನ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ಅಕ್ಕನ ಬಳಗದ ಪ್ರಮುಖರಾದ ಲಲಿತಾ ಕುಣಿಕೇರಿ, ಲೀಲಾವತಿ ಬಿರಾದಾರ್, ಭಾರತಿ ಸಂಗೋಳಗಿ, ಅನೀತಾ ಕಣಜಿ, ವಿಜಯಲಕ್ಷ್ಮೀ ಮೋರಖಂಡಿ, ಶಶಿಕಲಾ ಬಿರಾದಾರ್, ಶಿವರಾಜ್ ಮೋರಖಂಡಿ, ಬಾಬುರಾವ್ ಚಾಂಬೋಳ, ನಾಗನಾಥ ಸ್ವಾಮಿ, ಶಿವರಾಜ ನೇಳಗೆ, ವಿಜಯಕುಮಾರ ಸುತಾರ, ರಾಜಕುಮಾರ ಸಜ್ಜನಶೆಟ್ಟಿ, ಜಗನ್ನಾಥ ಮುಗಡಂಪಳ್ಳಿ, ಕುಪೇಂದ್ರ, ಕಂಟೆಪ್ಪ ಭಂಗೂರ, ಮಹಾಂತೇಶ ಡೊಂಗರಗಿ, ಕಾಶಿನಾಥ ನೌಬಾದೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net