ಸರ್ಕಾರದಿಂದ ರಾಜ್ಯದಲ್ಲಿ ತುಘಲಕ್ ಆಡಳಿತ

web3
Published on

ಬೈಲಹೊಂಗಲ: ದೇಶ ಪ್ರಗತಿಯ ದಿಕ್ಕಿನಲ್ಲಿ ಹೋಗುತ್ತಿರುವಾಗ, ಕರ್ನಾಟಕದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ತುಘಲಕ್ ಆಡಳಿತ ಖಂಡನೀಯ ಎಂದು ವಿ.ಪ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.

ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಈಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕೆಂಬ ಭ್ರಮೆಯಲ್ಲಿದೆ. ಶಿಕ್ಷಣ ಇಲಾಖೆ ಅತ್ಯಂತ ಶೋಚನೀಯ ಸ್ಥಿತಿ ಅನುಭವಿಸುತ್ತಿದೆ. ಶಿಕ್ಷಣ ಕ್ಷೇತ್ರದ ಹಲವಾರು ಬೇಡಿಕೆ ಈಡೇರಿಸಲು ಶಿಕ್ಷಣ ಸಚಿವರಿಗೆ ಮನವಿ ಮಾಡಿದರೆ, ಹಣಕಾಸಿನ ಇತಿಮಿತಿಯಲ್ಲಿ ಪರಿಶೀಲಿಸುತ್ತೇನೆ ಎನ್ನುವ ಹಾರಿಕೆ ಉತ್ತರ ಕೇಳಿ ಬರುತ್ತಿದೆ. ವಿವಾದಗಳನ್ನು ಹುಟ್ಟು ಹಾಕಿ ಬಾಕಿ ಬೇಡಿಕೆ ಮರೆಮಾಚುತ್ತಿದ್ದಾರೆ ಎಂದು ಆರೋಪಿಸಿದರು.

1995ರ ನಂತರ ಆರಂಭವಾದ ಶಾಲಾ, ಕಾಲೇಜುಗಳ ಅನುದಾನ ಕೊರತೆ, 2015ರ ಡಿಸೆಂಬರ್ ನಂತರ ಖಾಲಿ ಆಗಿರುವ ಅನೇಕ ಹುದ್ದೆಗಳ ಭರ್ತಿಯನ್ನು ಮೀಸಲಾತಿ ನೆಪದಲ್ಲಿ ತಡೆಹಿಡಿಯಲಾಗಿದೆ. ರಾಜ್ಯ ಸರ್ಕಾರ ಮೂರು, ಮೂರು ಪರೀಕ್ಷೆ ನಡೆಸುವ ತೀರ್ಮಾನ ಮಾಡುತ್ತಿರುವುದು ವಿವಾದಾತ್ಮಕ. ರಾಜ್ಯ ಸರ್ಕಾರದ ಮೊಂಡು ನೀತಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು. ಬಿಜೆಪಿ ಮುಖಂಡ ಗುರು ಮೆಟಗುಡ್ಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net