ಸರ್ಕಾರದಿಂದ ಪಾಲಿಕೆ ಮನವಿ ತಿರಸ್ಕಾರ?

h10-Indira Canteen
Published on

ಆನಂದ ಅಂಗಡಿ ಹುಬ್ಬಳ್ಳಿ

ಇಂದಿರಾ ಕ್ಯಾಂಟೀನ್​ನ ಶೇ. 70ರಷ್ಟು ವೆಚ್ಚವನ್ನು ಭರಿಸುವಂತೆ ಮಹಾನಗರ ಪಾಲಿಕೆ ಮಾಡಿದ್ದ ಮನವಿಯನ್ನು ರಾಜ್ಯ ಸರ್ಕಾರ ತಿರಸ್ಕೃರಿಸಿದೆಯೇ?

ಹೌದಾದಲ್ಲಿ ಮಹಾನಗರ ಪಾಲಿಕೆಗೆ ಪ್ರತಿ ವರ್ಷ ಕನಿಷ್ಠ 2 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುವುದು ಖಚಿತ.

ಇಂದಿರಾ ಕ್ಯಾಂಟೀನ್​ನ ವೆಚ್ಚದ ಶೇ. 30ರಷ್ಟನ್ನು ಕಾರ್ವಿುಕ ಇಲಾಖೆಯ ಸೆಸ್ ಹಾಗೂ ಶೇ. 70ರಷ್ಟನ್ನು ಮಹಾನಗರ ಪಾಲಿಕೆ ಎಸ್​ಎಫ್​ಸಿ ಅನುದಾನ ಇಲ್ಲವೆ ಸ್ವಂತ ಸಂಪನ್ಮೂಲದಿಂದ ಭರಿಸುವಂತೆ ಸರ್ಕಾರ ಈ ಹಿಂದೆಯೇ ಆದೇಶಿಸಿತ್ತು. ಇದು ಅಸಾಧ್ಯ ಎಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸೇರಿ ವಿವಿಧ ಪಾಲಿಕೆಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಶೇ. 70ರಷ್ಟು ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಮನವಿ ಮಾಡಿದ್ದವು. ಹು-ಧಾ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಕುರಿತು ವಿಸõತ ಚರ್ಚೆ ನಡೆದು, ಶೇ. 70ರಷ್ಟು ಅನುದಾನ ಪಾವತಿಗೆ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಗಿತ್ತು.

ಮಹಾನಗರ ಪಾಲಿಕೆಗಳು ಆರ್ಥಿಕವಾಗಿ ಶಕ್ತವಾಗಿರುವುದರಿಂದ ಇಂದಿರಾ ಕ್ಯಾಂಟೀನ್​ನ ಶೇ. 70ರಷ್ಟು ವೆಚ್ಚ ಭರಿಸುವಂತೆ ಇದೀಗ ನಗರಾಭಿವೃದ್ಧಿ ಇಲಾಖೆ ಸೂಚನೆ ನೀಡಿದೆ ಎಂದು ಹೇಳಲಾಗಿದೆ. ಈ ಕುರಿತು ಪಾಲಿಕೆಗೆ ಇದುವರೆಗೆ ಯಾವುದೇ ಲಿಖಿತ ಸೂಚನೆ ಬಂದಿಲ್ಲ. ಆದರೆ, ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಮೌಖಿಕ ಸೂಚನೆ ನೀಡಿದ್ದು, ಸದ್ಯದಲ್ಲೇ ಲಿಖಿತ ಆದೇಶ ಬರುವ ಸಾಧ್ಯತೆ ಇದೆ.

ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟ ಸೇರಿ ಪ್ರತಿ ತಿಂಗಳು ಇಂದಿರಾ ಕ್ಯಾಂಟೀನ್​ಗೆ 20ರಿಂದ 28 ಲಕ್ಷ ರೂ. ವೆಚ್ಚವಾಗುತ್ತಿದೆ. 2018ರ ಸೆಪ್ಟೆಂಬರ್​ನಿಂದ ಇದುವರೆಗೆ ಪಾಲಿಕೆ ತನ್ನ ಪಾಲಿನ 2.84 ಕೋಟಿ ರೂ. ಇಂದಿರಾ ಕ್ಯಾಂಟೀನ್​ನ ಬಾಕಿ ಹಣ ಪಾವತಿಸಬೇಕಿತ್ತು. ಇದರಲ್ಲಿ 1.79 ಕೋಟಿ ರೂ. ಸಂದಾಯ ಮಾಡಿದೆ. ಕಾರ್ವಿುಕ ಇಲಾಖೆ ಸಹ ತನ್ನ ಪಾಲಿನ 79,54,906 ರೂ.ಗಳನ್ನು ಜಿಲ್ಲಾಧಿಕಾರಿ ಖಾತೆಗೆ ಜಮಾ ಮಾಡಿದೆ. ರಸ್ತೆ ದುರಸ್ತಿ, ಸ್ವಚ್ಛತೆ ಮತ್ತಿತರ ಕಾರ್ಯಗಳ ಜತೆಗೆ ಮಹಾನಗರ ಪಾಲಿಕೆ ಇಂದಿರಾ ಕ್ಯಾಂಟೀನ್​ನ ಹೊರೆಯನ್ನೂ ಮುಂದುವರಿಸಬೇಕಾಗುತ್ತದೆ.

ಇಂದಿರಾ ಕ್ಯಾಂಟೀನ್ ಆರಂಭಿಸಿದ್ದಾಗ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಗೂ ಹು-ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇತ್ತು. ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಂದರ್ಭದಲ್ಲಿ ಈಗಿನ ಸಚಿವ ಜಗದೀಶ ಶೆಟ್ಟರ್ ಅವರು, ಕ್ಯಾಂಟೀನ್​ನ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಪಾಲಿಕೆಗೆ ಹೊರೆ ತಪ್ಪಿಸಬೇಕು ಎಂದು ಮನವಿ ಮಾಡಿದ್ದರು. ಪಾಲಿಕೆಯಲ್ಲಿಯೂ ಅಂದಿನ ಬಿಜೆಪಿ ಆಡಳಿತ, ಈ ಕುರಿತು ಠರಾವು ಪಾಸ್ ಮಾಡಿತ್ತು. ಆದರೆ, ಇದುವರೆಗೆ ಸರ್ಕಾರ ಇಂದಿರಾ ಕ್ಯಾಂಟೀನ್ ವೆಚ್ಚವನ್ನು ಯಾರು ಪಾವತಿಸಬೇಕೆಂಬ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ, ಅಂದಿನ ಕಾಂಗ್ರೆಸ್ ಸರ್ಕಾರ ನೀಡಿದ್ದ ಆದೇಶ ರದ್ದುಗೊಳಿಸುವ ಮೂಲಕ ಪಾಲಿಕೆಗೆ ಆಗುವ ಹೆಚ್ಚುವರಿ ವೆಚ್ಚ ತಪ್ಪಿಸಲು ಸಾಧ್ಯವಾಗಿಲ್ಲ.

ಇಂದಿರಾ ಕ್ಯಾಂಟೀನ್​ಗೆ ಹು-ಧಾ ಮಹಾನಗರ ಪಾಲಿಕೆ ಪಾವತಿಸಬೇಕಿದ್ದ 2.84 ಕೋಟಿ ರೂ. ಬಾಕಿ ವೆಚ್ಚದಲ್ಲಿ ಈಗಾಗಲೇ 1.79 ಕೋಟಿ ರೂ. ಪಾವತಿಸಿದೆ. ಕ್ಯಾಂಟೀನ್​ಗಾಗಿ ಪ್ರತಿ ತಿಂಗಳು ಕನಿಷ್ಠ 25 ಲಕ್ಷ ರೂ. ತೆಗೆದಿರಿಸಬೇಕಿದೆ. ಬಡವರು, ಕಾರ್ವಿುಕರು ಕ್ಯಾಂಟೀನ್​ಗಳನ್ನು ಹೆಚ್ಚು ಅವಲಂಬಿಸಿದ್ದಾರೆ. | ವಿಜಯಕುಮಾರ ಆರ್. ಕಾರ್ಯನಿರ್ವಾಹಕ ಇಂಜಿನಿಯರ್, ಹು-ಧಾ ಮಹಾನಗರ ಪಾಲಿಕೆ

ಇಂದಿರಾ ಕ್ಯಾಂಟೀನ್​ನ ಶೇ. 70ರಷ್ಟು ವೆಚ್ಚವನ್ನು ಸರ್ಕಾರ ಭರಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರೂ, ಇದುವರೆಗೆ ಯಾವುದೇ ಸ್ಪಷ್ಟ ಸೂಚನೆ ಬಂದಿಲ್ಲ. ಹೀಗಾಗಿ ಪಾಲಿಕೆಯಿಂದಲೇ ಭರಿಸಲಾಗುತ್ತಿದೆ. | ಡಾ. ಸುರೇಶ ಇಟ್ನಾಳ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net