ಸರ್ಕಾರದಿಂದ ಜಾಗ ಪಡೆಯಲು ಆಗ್ರಹ

20 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ 5 ಎಕರೆ ಜಾಗ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ ಭರವಸೆ ಈವರೆಗೂ ಈಡೇರದ ಕಾರಣ ಜಾಗ ಪಡೆಯಲು ಬೇಕಾದ ಅಗತ್ಯ ಕ್ರಮ ಹಾಗೂ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಲಾಯಿತು.

ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಸರ್ವ ಸದಸ್ಯರ ಸಾಧಾರಣ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು. ಆದಷ್ಟು ಬೇಗ ಸರ್ಕಾರದ ಮನವೊಲಿಸಿ 5 ಎಕರೆ ಜಾಗ ಪಡೆಯಲು ಆಡಳಿತ ಮಂಡಳಿಗೆ ಸದಸ್ಯರು ಒತ್ತಾಯಿಸಿದರು.

ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಂಘಕ್ಕೆ ಭೇಟಿ ನೀಡಿದಾಗ ಜಾಗ ನೀಡುವ ಭರವಸೆ ನೀಡಿದ್ದರು. ಆದರೆ ಈವರೆಗೂ ಈಡೇರಿಲ್ಲ. ಈಗ ಮತ್ತೆ ಅವರೇ ಸಿಎಂ ಆಗಿದ್ದು, ಈ ಬಗ್ಗೆ ಜಿಲ್ಲಾಡಳಿತದಿಂದ ಸಲ್ಲಿಸಿರುವ ಪ್ರಸ್ತಾವಗಳಿಗೆ ಅನುಮೋದಿಸಲು ಸಿಎಂ ಮನಮೊಲಿಸುವತ್ತ ಕವಿಸಂ ಆಡಳಿತ ಮಂಡಳಿ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.

ಧಾರವಾಡ ಶಹರದಿಂದ ದೂರ ಜಾಗ ಪಡೆಯುವ ಬದಲು ಶಹರ ವ್ಯಾಪ್ತಿಯಲ್ಲೇ ಜಾಗ ಪಡೆಯಬೇಕು. ಕೆಸಿ ಪಾರ್ಕ್​ ಉದ್ಯಾನ ಸೂಕ್ತವಾಗಿದ್ದು, ಈ ಜಾಗ ಪಡೆದರೆ ಕವಿಸಂ ಕಾರ್ಯ ಚಟುವಟಿಕೆಗಳಿಗೆ ಅನುಕೂಲ ಎಂದು ಸದಸ್ಯರು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹಾಗೂ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಈ ಬಗ್ಗೆ ಈಗಾಗಲೇ ಜಿಲ್ಲಾಡಳಿತದ ಪ್ರಸ್ತಾವನೆ ಸಲ್ಲಿಕೆಯಾಗಿವೆ. ಆದಷ್ಟು ಬೇಗ ಸಂಘಕ್ಕೆ ಜಾಗ ಸಿಗುವ ವಿಶ್ವಾಸವಿದೆ ಎಂದರು.

ಲೆಕ್ಕಪತ್ರ ತಪಾಸಿಗರು ತಪಾಸರಣಾ ವರದಿಯೊಂದಿಗೆ ಸಿದ್ಧಡಿಸಿದ 2023-24ನೇ ಸಾಲಿನ ಆಯ-ವ್ಯಯ ಮತ್ತು ಋಣ ಆಸ್ತಿ ಪತ್ರಿಕೆಗಳನ್ನು ಪರಿಶೀಲನೆ ನಡೆಸಿ, ಸಭೆಯಲ್ಲಿ ಒಪ್ಪಿಗೆ ಪಡೆಯಲಾಯಿತು.

ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕೋಶಾಧ್ಯಕ್ಷ ಸತೀಶ ತುರಮರಿ, ಸಹ ಕಾರ್ಯದಶಿರ್ ಶಂಕರ ಕುಂಬಿ, ಪದಾಧಿಕಾರಿಗಳಾದ ಡಾ.ಸಂಜೀವ ಕುಲಕರ್ಣಿ, ವೀರಣ ಒಡ್ಡಿನ, ಗುರು ಹಿರೇಮಠ, ಡಾ. ಜಿನದತ್ತ ಹಡಗಲಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net