

ಅಥಣಿ ಗ್ರಾಮೀಣ, ಬೆಳಗಾವಿ: ತಳವಾರ, ಪರಿವಾರ ಮತ್ತು ವಾಲ್ಮೀಕಿ ಸಮಾಜ ಮಾತ್ರ ಎಸ್ಟಿ ಮೀಸಲಾತಿ ಪಡೆಯಲು ಅರ್ಹರಿದ್ದು, ರಾಜ್ಯ ಸರ್ಕಾರ ಮತ ಬ್ಯಾಂಕ್‌ಗಾಗಿ ಇನ್ನೂ ಅನೇಕ ಸಮಾಜಕ್ಕೆ ಎಸ್ಟಿ ಮೀಸಲಾತಿ ಪ್ರಮಾಣ ಪತ್ರ ನೀಡುತ್ತಿರುವುದು ನಿಜವಾದ ಎಸ್ಟಿ ಸಮುದಾಯಕ್ಕೆ ಮಾಡುವ ಘೋರ ಅನ್ಯಾಯ ಎಂದು ರಾಜನಹಳ್ಳಿ ವಾಲ್ಮೀಕಿ ಜಗದ್ಗುರು ಪ್ರಸನ್ನಾನಂದ ಸ್ವಾಮೀಜಿ ಆರೋಪಿಸಿದರು.
ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜನಹಳ್ಳಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಹಾಗೂ ಅಥಣಿ ತಾಲೂಕು ಮಟ್ಟದ ವಾಲ್ಮೀಕಿ ಸಮುದಾಯ ಜನಜಾಗೃತಿ ಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಈಗಾಗಲೇ ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಸಮುದಾಯವನ್ನು ಮಾತ್ರ ಎಸ್ಟಿಗೆ ಸೇರಿಸಿದೆ. ಆದರೆ, ಈಚೆಗೆ ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಥಣಿ ತಾಲೂಕಿನ ಹಲ್ಯಾಳದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಎಸ್ಟಿ ಅಲ್ಲದ ಕೋಳಿ, ಕಬ್ಬಲಿಗ, ಗಂಗಾಮತ ಹಾಗೂ ಅಂಬಿಗರಿಗೂ ಪ್ರಮಾಣ ಪತ್ರ ನೀಡುತ್ತಿರುವುದು ಸರಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 27ರಂದು ರಾಜನಹಳ್ಳಿ ವಾಲ್ಮೀಕಿ ಸಭಾ ಭವನದಲ್ಲಿ ಎಸ್ಟಿಗೆ ಸೇರಿದ 15 ಶಾಸಕರು, ಇಬ್ಬರು ಸಂಸದರನ್ನು ಸೇರಿಸಿ ಸಭೆ ನಡೆಸಲಾಗುತ್ತದೆ. ಎಸ್ಟಿ ಸಮುದಾಯದವರು ಸಂಘಟಿತರಾಗಬೇಕು. 5ನೇ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದರು. ವಾಲ್ಮೀಕಿ ಸಮುದಾಯ ಮುಖಂಡ ರಮೇಶ ಸಿಂದಗಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಶ್ರೀಶೈಲ ಗಸ್ತಿ, ಬಾಬು ಹುಲ್ಯಾಳ, ನಾಗಪ್ಪ ದಳವಾಯಿ, ಮುದಕಪ್ಪ ಗಸ್ತಿ, ಲಕ್ಕಪ್ಪ ನಾಯಿಕ, ಹನುಮಂತ ಚಿಗರಿ, ಬಸಪ್ಪ ಜನವಾಡ, ಬಸಪ್ಪ ಹುಲ್ಯಾಳ, ಅಪ್ಪಾಜಿ ನಡುವಿನಮನಿ, ಧರ್ಮಪ್ಪ ಗಲಗಲಿ, ಶ್ರೀಧರ ಭುಜಣ್ಣವರ, ಶಿವಾನಂದ ನಾಯಿಕ, ಶೈಲಜಿರಾವ ನಾಯಕ ಇತರರಿದ್ದರು.